ಭಾನುವಾರ, ನವೆಂಬರ್ 24, 2013

ಮೌನ ಯೋಧ

ಮಲೆನಾಡ ತಪ್ಪಲಿನ ಆ ಊರಿಗೆ ಒಬ್ಬ ಅಪರಿಚಿತ ವೃದ್ದ ಮನುಷ್ಯನ ಆಗಮನವಾಯಿತು. ಆ ಊರಿಗೆ ಯಾವರೀತಿಯಲ್ಲೂ  ಸಂಬಂಧಪಡದ ಆತ ಯಾರೆಂಬುದು ಊರಿನ ಯಾರಿಗೂ ಗೊತ್ತಿಲ್ಲ .ಇದ್ದಕ್ಕಿದ್ದ ಹಾಗೇ ಪ್ರತ್ಯಕ್ಷವಾದ ಈ ಮನುಷ್ಯ ಆ ಊರನ್ನ ಬಿಟ್ಟು ಬೇರೆಲ್ಲೋ ವಾಸವಾಗಿದ್ದವನ ಅಳಿದುಳಿದ ಹಾಳು ಬಿದ್ದ ಅಡಿಕೆ ತೋಟವನ್ನ ಖರೀದಿಸಿ ಅಲ್ಲಿಗೆ ಬಂದಿದ್ದನೆಂಬುದು ಹೇಗೋ ಊರಿನವರಿಗೆ ಗೊತ್ತಾಯಿತು.  ಅದನ್ನ ಬಿಟ್ಟರೆ ಬೇರೇನೂ ಆ ವೃದ್ಧ ಅಪರಿಚಿತನ ಬಗ್ಗೆ ಊರವರಿಗೆ ಗೊತ್ತಿಲ್ಲ . ವಿಚಿತ್ರವೆಂದರೆ ಆತನು ಯಾರೊಂದಿಗೂ ಮಾತನಾಡಿದ್ದನ್ನು ಯಾರೂ ಇದುವರೆಗೆ ನೋಡಿಲ್ಲ. ಅಲ್ಲದೇ ಊರಿನ ಯಾರೊಂದಿಗೂ ಆತ ವ್ಯವಹರಿಸಿದ್ದೂ ಸಹ ಇಲ್ಲ. ಈ ವಿಚಿತ್ರ ಮನುಷ್ಯನು ಯಾರೆಂಬುದನ್ನು ತಿಳಿಯಬೇಕೆಂಬ ತಮ್ಮ ತುಮುಲವನ್ನು ತಡೆಹಿಡಿಯಲಾರದ ಕೆಲವರು, ಊರಿನ ಹೊರಗೆ ಅವನಿದ್ದ ಆ ಹಾಳು ತೋಟದ ಕಡೆಗೆ ಏನೋ ಕೆಲಸವಿದೆ ಎನ್ನುತ್ತ ನಟಿಸುತ್ತ ಅವನನ್ನು ಸಂಧಿಸಿದರೂ ಅವರಿಗೆ ಸಿಕ್ಕಿದ್ದು  ಆ ವೃದ್ಧನ ಮೌನ ಮತ್ತು ಮುಗುಳ್ನಗು ಮಾತ್ರ. ಅವರು ಎಷ್ಟು ಮಾತನಾಡಿಸಲು ಪ್ರಯತ್ನಿಸಿದರೂ ಆತನ ಮೌನವೇ ಅವರಿಗೆ ಉತ್ತರವಾಗಿ ಸಿಗುತ್ತಿತ್ತು. ಕೆಲವೊಮ್ಮೆ “ನನಗೆ ನಿಮ್ಮ ಜೊತೆ ಮಾತನಾಡಲು ಇಷ್ಟವಿಲ್ಲ” ಎನ್ನುವ ಭಾವದ ಮುಗುಳ್ನಗೆ ಅವರಿಗೆ ಎದುರಾಗುತ್ತಿತ್ತು. ಹೀಗೆ ಆ ವೃದ್ಧ ಮೌನಿಯ ಬಗ್ಗೆ ಏನು ಎತ್ತ ಎಂದು ತಿಳಿಯಲು ಪ್ರಯತ್ನಿಸಿದಷ್ಟು ಮತ್ತಷ್ಟು ವಿಚಿತ್ರಗಳು ಅವರನ್ನು ಎದುರಾಗುತ್ತಿತ್ತು. ಆತನ ಈ ವಿಚಿತ್ರ ನಡೆಯನ್ನು ನೋಡಿ “ಸಾಕಪ್ಪ ಈ ಹುಚ್ಚನ ಸಹವಾಸ” ಎನ್ನುತ್ತ ಆತನನ್ನು ನಿರ್ಲಕ್ಷಿಸ ತೊಡಗಿದರು. ಅಲ್ಲದೇ ಊರಿನ ಕೆಲವರು ಈಗಾಗಲೇ ಆ ಹಾಳು ತೋಟವನ್ನು ಹೇಗಾದರೂ ಕಬಳಿಸಬೇಕೆನ್ನುವ ಹುನ್ನಾರ ನಡೆಸುತ್ತಿದ್ದವರಿಗೂ ಹೊಸದಾಗಿ ಈತ ಬಂದು ಸೇರಿದ್ದರಿಂದ ತಲೆಕೆಡಿಸಿಕೊಂಡು ಆತನನ್ನು ಅಲ್ಲಿಂದ ಹೇಗಾದರೂ ಹೆದರಿಸಿ ಓಡಿಸಲು ತಂತ್ರ ರೂಪಿಸಬೇಕೆಂದು ಯೋಚಿಸತೊಡಗಿದರು.
ಆತ ಹುಚ್ಚನೆಂದು ತಿಳಿದಿದ್ದ ಊರವರಿಗೆ ಆದ ಆಶ್ಚರ್ಯವೆಂದರೆ ಆತ ಬಂದ ಕೆಲವೇ ತಿಂಗಳುಗಳಲ್ಲಿ ಹಾಳು ಬಿದ್ದ ಆ ಅಡಿಕೆ ತೋಟ ಊಹಿಸಲು ಆಗದ ರೀತಿಯಲ್ಲಿ ಸುಧಾರಿಸಿತ್ತು. ಅರೆಜೀವವಾಗಿದ್ದ ಮರಗಳಲ್ಲಿ ಹೊಸ ಕಳೆ ಬಂದಿತ್ತು. ಅದ್ಯಾವುದೋ ಜಾತಿಯ ಹೊಸ ಬಗೆಯ ಸಸ್ಯಗಳೆಲ್ಲ ಆ ತೋಟದಲ್ಲಿ ಪ್ರತ್ಯಕ್ಷವಾಗಿತ್ತು. ಆ ಮುದುಕನ ಕೈಲಿ ಈ ರೀತಿ ಕೆಲಸ ಮಾಡಿ ತೋಟವನ್ನು ಸುಧಾರಿಸಲು ಹೇಗೆ ಸಾಧ್ಯ ಎಂದೆಲ್ಲಾ ಊರವರು ತಲೆ ಕೆಡಿಸಿಕೊಂಡು ಸುಮ್ಮನೆ ಕೂರಲಾಗದೆ ಎಲ್ಲಿಂದ ಕೆಲಸಗಾರರು ಬರುತ್ತಾರೆ ಹೇಗೆ ಅವನು ಕೆಲಸ ಮಾಡಿಸುತ್ತಾನೆ ಅಂದೆಲ್ಲ ತಿಳಿಯಲು ಪ್ರಯತ್ನಿಸತೊಡಗಿದರು. “ನಮ್ಮೂರಿನ ಕೆಲವರು ಅಲ್ಲಿಗೆ ಕೆಲಸಕ್ಕೆ ಹೋಗಿದ್ದರೆಂದೂ, ಆತನು ಏನೇನೋ ಮೆಷಿನು, ಗಿಡ, ಔಷಧಿ ತರಿಸಿದ್ದಾನೆಂದೂ, ದಿನ ಪೂರ್ತಿ ತೋಟದಲ್ಲೇ ಏನೇನೋ ಮಾಡುತ್ತಿರುತ್ತಾನೆ” ಅಂತ ತಿಳಿದುಕೊಂಡರು. ಆದರೆ ಆತ ಯಾರೊಂದಿಗೂ ಜಾಸ್ತಿ ಮಾತನಡುವುದಿಲ್ಲವೆಂದೂ , ಆಗೊಮ್ಮೆ ಈಗೊಮ್ಮೆ ಏನೇನು ಕೆಲಸ ಮಾಡಬೇಕೆಂದು ಹೇಳಿ ತನ್ನದೇ ಆದ ಮುಳುಗಿರುತ್ತಾನೆ” ಅಂತೆಲ್ಲ ಆತನ ಬಗ್ಗೆ ಸಂಶೋಧಿಸಿ ಇಡೀ ಊರಿಗೆ ಸುದ್ದಿಯನ್ನ ಬಿತ್ತರಿಸ ತೊಡಗಿದರು.
      ಅದೇ ಊರಿನ ಬೀರ ಆ ವಿಚಿತ್ರ ಮನುಷ್ಯನ ತೋಟದಲ್ಲಿ ಹಾಗೂ ಮನೆಗೆಲಸಕ್ಕೆ ಖಾಯಂ ಕೆಲಸಗಾರನಾಗಿದ್ದ . ಈ ವಿಚಿತ್ರ ವೃದ್ಧ ಮೌನಿಯ ದೆಸೆಯಲ್ಲಿ ಆತ ಇಡೀ ಊರಿಗೆ ಬೇಕಾದವನಾಗಿದ್ದ . ಎಲ್ಲರಿಗೂ ಆ ವೃಧ್ಧ ಮೌನಿ ಏನೇನು ಮಾಡುತ್ತಾನೆ ಎಂಬುದನ್ನ ಬೀರನಿಂದ ತಿಳಿಯಬೇಕೆನ್ನುವ ಮನುಷ್ಯ ಸಹಜ  ಕುತೂಹಲ. “ನಂಗೂ ಏನು ಜಾಸ್ತಿ ಅರ್ಥ ಆಗುದಿಲ್ಲ. ಅವಾಗ ಇವಾಗ ಏನಾದ್ರೂ ಹೇಳುವುದಿದ್ರೆ ಮಾತಾಡಿದ್ರು ಇಲ್ಲ ಅಂದ್ರೆ ಅವರಷ್ಟಕ್ಕೆ ಎಂತದೋ ಮಾಡ್ತಾ ಇರುತ್ತಾರೆ. ಯಾವ್ಯಾವುದೋ ಪುಸ್ತಕ ಎಲ್ಲಾ ಓದುತ್ತ ಇರುತ್ತ್ರು. ಕೆಲವೊಮ್ಮೆ ತಪಸ್ಸಿಗೆ ಅಂತೆಲ್ಲ ಕುಳ್ತ್ಕೊಳುದು ಉಂಟು” ಅಂತೆಲ್ಲ ತನಗೆ ತಿಳಿದಷ್ಟು ಊರವರಿಗೆ ಹೇಳುತ್ತಿದ್ದ. ಬೀರನಿಗೂ ಇದೆಲ್ಲಾ ನೋಡಿ ಆ ಮುದುಕ ಎಂಥದೋ ಭಯಂಕರ ವಿಚಿತ್ರ ಜೀವಿ ಎಂಬ ಭಾವನೆ ಹುಟ್ಟಿ ಆತನಲ್ಲಿ ಭಯ ಭಕ್ತಿ  ನೆಲೆಗೊಂಡಿತ್ತು.  ಹೀಗೆ ದಿನಕಳೆದಂತೆ ಈ ಮುದುಕನ ಬಗ್ಗೆ ಬಗೆ ಬಗೆಯ ಸುದ್ದಿಗಳು ಹರಡತೊಡಗಿತ್ತು. ಆ ವೃದ್ಧ ಮೌನಿಯ ತೋಟದ ಕೆಲಸಕ್ಕೊ ಅಥವಾ ಇನ್ಯಾವುದೋ ಉದ್ದೇಶವಿದ್ದಂತೆ ಹೋದವರು ಅಲ್ಲಿ ನೋಡಿದ್ದನ್ನು ಬಗೆ ಬಗೆಯಾಗಿ ಚಿತ್ರಿಸುತ್ತಿದ್ದರು. ಹೀಗೆ ಆ ವೃದ್ಧ ಮೌನಿ ಮೌನವಾದಷ್ಟೂ ಜನರಲ್ಲಿ ಆತನ ಬಗ್ಗೆ ಕುತೂಹಲ ಇಮ್ಮಡಿಸಿದವು.
ಹೀಗಿರುವಾಗ ಆ ವಿಚಿತ್ರ ಮನುಷ್ಯ ಅದೇನೋ ಔಷಧಿ ತಯಾರಿಸಿದ್ದಾನೆಂದೂ ಅದನ್ನ ತೋಟಕ್ಕೆ ಹಾಕಿದರೆ ಅಡಿಕೆಗೆ ಕೊಳೆ ರೋಗ ಬರುವುದಿಲ್ಲವೆಂದೂ ಬೀರ ಊರಿನಲ್ಲಿ ಸುದ್ದಿ ಹಬ್ಬಿಸಿದ. ಅದೇ ಪ್ರಕಾರ ಆ ವೃದ್ಧ ಮೌನಿಯ ತೋಟದಲ್ಲಿ  ವರ್ಷದ ಭಾರೀ ಮಳೆಗೆ ಕೊಳೆ ರೋಗ ಅಂಟಿರಲಿಲ್ಲ. ಆದರೆ ಊರಿನ ಬಹುತೇಕ ತೋಟಕ್ಕೆ ರೋಗವು ತಗುಲಿ ಅಡಿಕೆಯೆಲ್ಲ ನಾಶವಾಗಿತ್ತು. ಇವೆಲ್ಲಾ ನೋಡಿ ಊರಿನವರಿಗೆ ಬೀರನ ಮಾತು ನಿಜವೆನಿಸಿ ಆ ಮೌನಿಯ ಹತ್ತಿರ ಹೇಗಾದರೂ ಆ ಔಷಧಿಯನ್ನು ಹೇಗಾದರೂ ಪಡೆಯಬೇಕೆಂದು ಯೋಚಿಸಿದರು. ಅಲ್ಲದೇ ಬೀರನು ಆ ವೃಧ್ಧ ಮೌನಿ ಮತ್ತೂ ಏನೇನೋ ಕಂಡು  ಹಿಡಿದಿದ್ದಾನೆಂದೂ , ಆ ತೋಟದಲ್ಲಿ ಈಗ ಒಂದಕ್ಕೆ ಎರಡರಷ್ಟು ಬೆಳೆ ಬರುತ್ತದೆ ಎಂದೂ, ನೀರು ಬರುವುದಿಲ್ಲ ಎಂದು ಹಾಗೇ ಬಿಟ್ಟಿದ್ದ ಜಾಗದಲ್ಲೆಲ್ಲೋ ಅವರು ತೋರಿಸಿದಲ್ಲೇ ಬಾವಿ ತೋಡಿದಾಗ ಅಲ್ಲಿ ಭಾರೀ ನೀರು ಬಂತೆಂದೂ, ಅವರ ಹತ್ತಿರ ಭಾರೀ ರಹಸ್ಯದ ಪುಸ್ತಕಗಳೆಲ್ಲ ಇದೆಯೆಂದೂ, ಆತ ಮಹಾಜ್ಞಾನಿ,  ತಪಸ್ವಿ , ದೇವೆರನ್ನು ಒಲಿಸಿಕೊಂಡವರು  ಎಂದೆಲ್ಲಾ ಬಣ್ಣಿಸಿ ಊರಿನಲ್ಲೆಲ್ಲ ಸುದ್ಧಿ ಹಬ್ಬಿಸಿದ.
ಹೀಗೆ ದಿನ ಕಳೆದಂತೆ ಆ ಮೌನಿಯ ಯಶೋಗಾಥೆ ಆ ಊರಿನಲ್ಲಲ್ಲದೇ ಅಕ್ಕ ಪಕ್ಕದ ಊರುಗಳಲ್ಲೂ ಹಬ್ಬ ತೊಡಗಿತ್ತು. ಆತ ಊರಿಗೆ ಬಂದು ಆಗಲೇ ಒಂದು ವರ್ಷ ಕಳೆದಿದ್ದರೂ, ಅಲ್ಲಿಗೆ ಕೆಲಸಕ್ಕೆಂದು ಹೋಗುವ ಬೀರ ಮತ್ತಿತರನ್ನು ಬಿಟ್ಟರೆ ಆ ವೃದ್ಧ ಮೌನಿಯನ್ನು ಭೇಟಿ ಮಾಡಿದವರೇ ಇರಲಿಲ್ಲ. ಹೀಗೆ ಬೀರ ಹೇಳುತ್ತಿದ್ದ ಯಶೋಗಾಥೆಗಳಿಂದಲೇ ಆ ಮೌನಿಯ ಬಗ್ಗೆ ಇರುವ ಕುತೂಹಲದ ಜೊತೆಗೆ ಆತ ದೈವ ಸ್ವರೂಪಿಯೆಂದೂ ಹಾಗಾಗಿ ಸಾಮಾನ್ಯ ಮನುಷ್ಯರ ಜೊತೆ ಬೆರೆಯಲು ಆತ ಇಚ್ಚಿಸುವುದಿಲ್ಲ ಅಂತೆಲ್ಲ ಊರಿನಲ್ಲಿ ಜನ ಜನಿತವಾಗತೊಡಗಿತು. ಹಾಗಾಗಿ ದಿನ ಕಳೆದಂತೆ ಆ ಮೌನಿಯ ವಾಸಸ್ಥಾನ ಈಗ ಯಾವುದೋ ದೇವಮಾನವನ ಆವಾಸವೆಂಬಂತೆ ಜನ ಭಯ ಭಕ್ತಿಯಿಂದ ನಡೆದುಕೊಳ್ಳತೊಡಗಿದ್ದರು . ಆತನನ್ನು ಓಡಿಸಬೇಕೆಂದುಕೊಂಡಿದ್ದ ಊರಿನ ಕೆಲವು ವಿರೋಧಿಗಳೂ ಸಹ  ಬೀರ ಊರವರಿಗೆಲ್ಲ ಹೇಳುತ್ತಿದ್ದ ಆ ವೃದ್ಧ ಮೌನಿಯ ದೈವತಾ ಗುಣಗಳಿಂದಲೂ ಹಾಗೂ ಆತನ ಯಾರೂ ನೋಡಿರದ ರಹಸ್ಯವಾದ ನಡೆಗಳಿಂದಲೂ  ಗೊಂದಲಕ್ಕೊಳಗಾಗಿ  ತಾವು ಆಗಲೇ ರೂಪಿಸಿದ್ದ ಕೆಲವು ಷಡ್ಯಂತ್ರಗಳಿಂದ ಹಿಂದೆ ಸರಿಯತೊಡಗಿದರು.
     ಹೀಗೆ ಕೆಲವು ವರ್ಷಗಳಲ್ಲಿ  ಆ ಮೌನಿಯ ಎಲ್ಲಾ ವ್ಯವಹಾರ , ತೋಟದ ಹಾಗೂ ಮನೆಯ ಕೆಲಸ ಎಲ್ಲಾ ನೋಡಿಕೊಳ್ಳುತ್ತಿದ್ದ ಬೀರನ ದೆಸೆಯಿಂದಲೋ ಏನೋ ಆ ಮೌನಿ ಇದುವರೆಗೆ ಒಂದೇ ಒಂದು ಮಾತನ್ನು ಊರಿನಲ್ಲಿ ಆಡದಿದ್ದರೂ, ಆತನ ಜನಪ್ರಿಯತೆ ಸಾಕಷ್ಟು ಹರಡಿತ್ತು. ಬೀರನೂ ಆ ವೃದ್ಧ ಮೌನಿಯು ದೈವ ಸ್ವರೂಪಿಯೆಂದೆ ತಿಳಿದು ಭಯ ಭಕ್ತಿ ನಿಷ್ಟೆಯಿಂದ ನಡೆದು ಕೊಳ್ಳುತ್ತಿದ್ದ. ಇಂತವರಿಗೆ ಮೋಸ ಮಾಡಿದರೆ ಆ ದೇವೆರು ಸುಮ್ಮನೆ ಬಿಡುವುದಿಲ್ಲವೆಂಬ ಭಯವೂ ಆತನಲ್ಲಿ ನೆಲೆಸಿತ್ತು. ಹೀಗೆ ಆ ಮೌನಿಯ ಮೌನ ಆಚರಣೆ ಮುಂದುವರಿದಂತೆಲ್ಲ ಆತನ ಕೀರ್ತಿಯೂ ಹೆಚ್ಚುತ್ತಾ ಆತ ಒಬ್ಬ ದೇವಾಂಶ ಸಂಭೂತನಾಗುತ್ತ ಹೋದ. ಎಲ್ಲರಲ್ಲೂ  ಆತ ದಿನವಿಡೀ ಏನು ಮಾಡುತ್ತಾನೆ,  ಅವನಿಗೆ ಯಾವ  ರಹಸ್ಯವಿದ್ಯೆಗಳೆಲ್ಲ ತಿಳಿದಿದೆ ಎನ್ನುವ ಕುತೂಹಲ. ಒಮ್ಮೆ ಅವನನ್ನು ದೂರದಿಂದಾರೂ ನೋಡಿ ಹೇಗಾದರೂ ಮಾಡಿ ಆತನ ಸ್ನೇಹ ಸಂಪಾದಿಸಬೇಕೆನ್ನುವ ತವಕ. ಆತನ ಕಾಲಿಗೆರಗಿ ಒಮ್ಮೆ ನಮಸ್ಕರಿಸಿ ಆತನ ಆಶೀರ್ವಾದ ಪಡೆಯ ಬೇಕೆನ್ನುವ ಅಭಿಲಾಷೆ.  ಆದರೆ ಆ ಮೌನಿಯನ್ನು ಊರವರು ಸಂಧಿಸಲು ಯತ್ನಿಸಿದಷ್ಟು ಆತ ಅವರಿಂದ ದೂರ ಸರಿಯುತ್ತಿದ್ದ. ಊರವರೂ ಸಹ ಆತ ಏನಾದರೂ ಸಿಟ್ಟಿನಲ್ಲಿ ತಮಗೆ ತನ್ನ ರಹಸ್ಯ ವಿದ್ಯೆಗಳಿಂದ  ಹೆಚ್ಚು ಕಡಿಮೆ ಮಾಡಿದರೆ ಎಂದು ಹೆದರಿ ಆತನನ್ನು ದೂರದಿಂದಲೇ ನೋಡಿ ವಾಪಸ್ಸಾಗುತ್ತಿದ್ದರು. ಅಲ್ಲದೇ ಊರಲ್ಲಿ ಆಗೊಮ್ಮೆ ಈಗೊಮ್ಮೆ ಆ ವೃದ್ಧ ಮೌನಿಯ ಮಹಿಮೆಯ ಬಗ್ಗೆ ಹಬ್ಬುತ್ತಿದ್ದ ಸುದ್ದಿಗಳನ್ನು ಕೇಳಿ ಕೃತಾರ್ಥರಾಗುತ್ತಿದ್ದರು.
    ಹೀಗೆ ಕಾಲ ಸರಿಯುತ್ತ ಒಂದೆರಡು ವರ್ಷಗಳ ನಂತರ ಬೀರ ಒಂದು ದಿನ ಇದ್ದಕ್ಕಿದ್ದ ಹಾಗೇ ಭಯಭೀತ ನಾಗಿ ಎದುರುಸಿರು ಬಿಡುತ್ತ ಊರಿಗೆ ಬಂದು ಜನರನ್ನೆಲ್ಲ ಸೇರಿಸಿ ಆ ವೃದ್ಧ ಮೌನಿಯ ಮನೆಗೆ ಕರೆದುಕೊಂಡು ಹೋಗಲು ಬಂದ. ಯಾತಕ್ಕೆ ಅವರನ್ನು ಅಲ್ಲಿಗೆ ಕರೆದುಕೊಂಡು ಹೋಗುತ್ತಿದ್ದನೆಂದು ಹೇಳಲೂ ಆಗದಷ್ಟು ಭಯ ಅವನನ್ನು ಆವರಿಸಿತ್ತು. ಊರವರು ಏನೋ ದೊಡ್ಡ ಅನಾಹುತ ನಡೆದಿದೆ ಎಂದು ಭಾವಿಸಿ ಹೇಗೋ ಧೈರ್ಯ ಮಾಡಿ ಆ ಮೌನಿ ಇರುವ ತೋಟದಲ್ಲಿನ ಮನೆಗೆ ಬಂದರು. ಅಲ್ಲಿ ನೋಡಿದರೆ ಆ ವೃದ್ಧ ಮೌನಿ, ಮನೆಯ ಮುಂದೆ ಖುರ್ಚಿಯಲ್ಲಿ ಅಲುಗಾಡದೆ ಕುಳಿತಿದ್ದ. ಅದೇನನ್ನೋ ಆಳವಾಗಿ ಯೋಚಿಸುತ್ತಿದ್ದ ಭಾವ ಅವನ ಮುಖದಲ್ಲಿ ನೆಲೆಗೊಂಡಿತ್ತು. “ನಿನ್ನೆ ಸಂಜೆಯಿಂದಲೇ ಹೀಗೆ ಕುಂತ್ಕಂಡಿದ್ದಾರೆ ಸಾಮಿ , ನಾನು ಬೆಳಿಗ್ಗೆ ಬಂದು ನೋಡಿದರು ಹಂಗೆ ಆವ್ರೇ, ಮುಟ್ಟಿ ಮಾತಾಡಿಸಿದ್ರೂ  ಅಲುಗಾದ್ಲೆ ಇಲ್ಲ , ಅದಕ್ಕೆ ಎಂತ ಆಯ್ತೇನ ಹೇಳಿ ಹೆದರಿಕೆ ಆಗಿ ಏನು ಮಾಡಬೇಕು ಗೊತ್ತಾಗದೆ ಊರಿಗೆ ಬಂದೆ ಸಾಮಿ” ಎನ್ನುತ್ತ ಬೀರ ಊರವರಲ್ಲಿ ಭಿನ್ನವಿಸಿದ.  ಊರವರಿಗೂ ಏನು ಮಾಡಬೇಕೆಂದು ತೋಚದೇ , ಕೊನೆಗೂ ಧೈರ್ಯ  ಮಾಡಿ ಪರೀಕ್ಷಿಸಿದಾಗ ಅವರಿಗೆ ಅರಿವಾದದ್ದು ಆ ವೃದ್ಧ ಮೌನಿಯ ಪ್ರಾಣ ಹೋಗಿ ಮೌನದಲ್ಲಿ ಸೇರಿದೆ ಎನ್ನುವುದು.
    ಸರಿ ಇನ್ನೇನು ಮಾಡುವುದು, ದಿಕ್ಕು ದೆಸೆಯಿಲ್ಲದ ಈ ಮುದುಕನ  ಅಂತ್ಯ ಸಂಸ್ಕಾರಕ್ಕೆ ಏನೇನು ಬೇಕೊ ಮಾಡುವುದು ಎಂದು ನಿರ್ಧರಿಸಿ ಅವನನ್ನು ಅಲ್ಲಿಂದ ಎತ್ತಲು ಪ್ರಯತ್ನಿಸಿದಾಗ ಆ ಮುದುಕ ಏನನ್ನೋ ಅರ್ಧಂಬರ್ಧ ಗೀಚಿದ ಹಾಳೆಯನ್ನು ಕೈಯಲ್ಲಿ ಹಿಡಿದು ಕೊಂಡಿದ್ದ.  ಊರವರು ಅಸ್ಪಷ್ಟವಾಗಿ ಗೀಚಿದ್ದ ಆ ಹಾಳೆಯನ್ನು ಓದಲು ಪ್ರಯತ್ನಿಸಿದರು. ಅಲ್ಲಿ ಅಸ್ಪಷ್ಟವಾಗಿ ಬರೆದಿದ್ದ ಕೆಲವು ಸಾಲುಗಳು ಕಂಡವು.

“ಯಾವುದೇ ಯುದ್ದವನ್ನು ಮೌನದಿಂದ ಗೆಲ್ಲಲು ಸಾಧ್ಯವೇ ?”

“ಅಂತಹ ನಿಪುಣ ಮೌನ ಯೋಧ ನಿಜವಾಗಲೂ ಇರಲು ಸಾಧ್ಯವೇ ?”

“ಆ ಮೌನ ಯೋಧ ಯುಧ್ದದ  ಅವ್ಯಕ್ತ ಅರ್ಥ ತಿಳಿದಿರುವವ, ಮೌನ ಹಾಗೂ ಶಾಂತವಾಗಿರುವಂತೆ ತೋರುವ ಈತ  ಯುಧ್ಧ ಆರಂಭವಾಗುವ ಮೊದಲೇ ಅದನ್ನ ನಿರೀಕ್ಷಿಸಿ ಸಮಯ ಸಾಧಿಸಿ  ಎದುರಿಸುವವ.  ಆತ ಇಡಿ ಯುದ್ಧವನ್ನು ತನ್ನ ಮನಸ್ಸಿನ ಆಳದಲ್ಲೆಲ್ಲೋ ಒಬ್ಬಂಟಿಯಾಗಿ ಎದುರಿಸಿ ಗೆಲ್ಲುವವ. ಯಾರಿಗೂ ಆತ ಯುದ್ಧವನ್ನು ಗೆದ್ದಿದ್ದಾನೆಂಬುದರ ಅರಿವೇ ಇರುವುದಿಲ್ಲ ಯಾಕೆಂದರೆ ಅವರಿಗೆ ಅಂತಹ ಯುಧ್ದ ನಡೆದಿದ್ದುದು ಗೊತ್ತೇ ಇಲ್ಲ . ಈ ಮೌನ ಯೋಧನ ಯುದ್ಧಕ್ಕೆ ಯಾವುದೇ ದ್ವೇಷದ ಹಂಗಿಲ್ಲ . ಅವನು ಯಾವಾಗಲೂ ಆತನ ಯಶಸ್ಸಿನಿಂದಲೇ ಗುರುತಿಸಲ್ಪಡುವವ. ಈ ಮೌನ ಯೋಧ ಆತನ ಶತ್ರು ಗಳಿಂದಲೂ ಗೌರವಿಸಲ್ಪಡುವವ ಯಾಕೆಂದರೆ ಅವರಿಗೆ ತಮ್ಮ ವಿರುದ್ದವೇ ಆತ ಜಯಿಸಿದ್ದಾನೆಂಬ ಅರಿವೂ ಇರುವುದಿಲ್ಲ”.

“ನಿಜವಾಗಿಯೂ  ಮೌನಕ್ಕೆ ಅಂತಹ ಶಕ್ತಿ ಇದೆಯೇ ?”

“ಅಂತಹ ಮೌನ ಯೋಧ ನಮ್ಮೊಳಗಿರಲು ಸಾಧ್ಯವೇ ?”

“ಅಂತಹ ಮೌನ ಯೋಧನ ಕೌಶಲ್ಯ ಸಾಧಿಸಲು ಸಾಮಾನ್ಯ ಮನುಷ್ಯರಿಂದ ಸಾಧ್ಯವೇ ?”

ಮುಂದೆ ಅದೇನೋ ಬರೆಯಲು ಯತ್ನಿಸಿ ಅರ್ಧಕ್ಕೆ ನಿಲ್ಲಿಸಿದಂತೆ ಆ ಹಾಳೆಯಲ್ಲಿ  ಭಾಸವಾಗುತ್ತಿತ್ತು.
ಆ ಊರವರು ಈ ದೇವಮಾನವ ಅದೇನೋ  ತಮಗರ್ಥವಾಗದ ವಿಚಿತ್ರವಾದ ರಹಸ್ಯವನ್ನು ಬರೆದಿದ್ದಾನೆಂದು ನಿರ್ಧರಿಸಿ ಮುಂದಿನ ಕಾರ್ಯಕ್ಕೆ ಅಣಿಯಾದರು.

ಭಾನುವಾರ, ಜೂನ್ 2, 2013

ನನ್ನ ಹೆಸರು



ಒಂದು ದಿನ ಬೆಳಿಗ್ಗೆ ಹೀಗೆ ನಗರದ ಯಾವುದೋ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಒಂದು ಪ್ರಶ್ನೆ ನನ್ನನ್ನು ಕಾಡತೊಡಗಿತು. ಏನಪ್ಪಾ ಅದು ಅಂಥಹ ಪ್ರಶ್ನೆ ಅಂದರೆ “ನನ್ನ ಹೆಸರೇನು ?” ಎಂಬುದು. ಯಾಕೋ ಏನೋ ಎಷ್ಟು ಪ್ರಯತ್ನಿಸಿದರೂ ನನ್ನ ಹೆಸರು ಮಾತ್ರ ನೆನಪಿಗೆ ಬರಲಿಲ್ಲ. ಎಷ್ಟೇ ತಿಪ್ಪರಲಾಗ ಹಾಕಿ ಯೋಚಿಸಿದರೂ ಅಷ್ಟೇ,  ನನ್ನ ಕಿಸೆ, ಫರ್ಸಿನೊಳಗಿನ ಹಳೆಯ ಕಾಗದದ ಚೂರುಗಳನ್ನು ಹುಡುಕಿದರೂ ಅಷ್ಟೆ, ನನ್ನ ಹೆಸರು ಮಾತ್ರ ನೆನಪಿಗೆ ಬರುತ್ತಿಲ್ಲ. ಹೋದರೆ ಹೋಗಲಿ ಅದಕ್ಯಾಕೆ ಅಷ್ಟೊಂದು ತಲೆ ಕೆಡಿಸಿಕೊಳ್ಳಬೇಕು ಅಂದರೆ,  ತಲೆಯೊಳಗೆ ಹುಳದಂತೆ ಕೊರೆಯುತ್ತಿದ್ದ ಆ ಪ್ರಶ್ನೆ ನನ್ನನ್ನು ಬಿಡಬೇಕಲ್ಲ. ಅದು ಇನ್ನಷ್ಟು ಆಳವಾಗಿ ನನ್ನ ಮಿದುಳನ್ನು ಕೊರೆಯತೊಡಗಿತು.  ಏನಾದರೂ ಆಗಲಿ ನನ್ನ ಹೆಸರನ್ನು ಕಂಡುಕೊಳ್ಳಲೇ ಬೇಕೆಂದು ನನ್ನೊಬ್ಬ ಆತ್ಮೀಯ ಗೆಳಯನಿಗೂ ಫೋನಾಯಿಸಿದೆ. ಅವನು “ಬೆಳಿಗ್ಗೆ ಬೆಳಿಗ್ಗೆ ತಮಾಷೆ ಮಾಡಿ ತಲೆ ತಿನ್ನಲು ಬೇರೆ ಯಾರೂ ಸಿಗಲಿಲ್ಲವೇ?” ಎನ್ನುತ್ತ ಮಾತು ಮುಂದುವರಿಸಿದನೆ ಹೊರತು ನನ್ನ ಹೆಸರನ್ನು ಮಾತ್ರ ಹೇಳಲಿಲ್ಲ.  ಅವನು ಹೇಳದಿದ್ದರೆ ಹೋಗಲಿ ಒಂದು ಲೋಟ ಚಹಾ ಕುಡಿದರೆ ಉತ್ತಜಿತ ನನ್ನ ತಲೆ ನನ್ನ ಹೆಸರನ್ನು ನೆನಪಿಸಿಕೊಳ್ಳಬಹುದೆಂದು ಹತ್ತಿರವೇ ಇದ್ದ ಯಾವುದೋ ಒಂದು ಹೋಟೆಲಿಗೆ ನುಗ್ಗಿದೆ. ಚಹಾ ಕುಡಿದರೂ ಅಷ್ಟೇ, ಹೆಸರು ಮಾತ್ರ ಹೊಳೆಯಲಿಲ್ಲ. ಅಲ್ಲಿಯೇ ದುಡ್ಡನ್ನು ಎಣಿಸುತ್ತಿದ್ದ ಹೋಟೆಲ್ ಮಾಲಿಕನನ್ನು ಒಮ್ಮೆ ಕೇಳೋಣ ಎನಿಸಿತು.
 “ಯಾರಯ್ಯ ನೀನು ? ಬೆಳಿಗ್ಗೆ ಬೆಳಿಗ್ಗೆ ತಲೆ ತಿನ್ನುತ್ತಿಯ. ನೀನೇನು ಮುಖ್ಯಮಂತ್ರಿಯೋ , ಸಿನಿಮಾ ಹೀರೋನ  ಅಥವಾ ಮಹಾನ್ ಸಾಧಕನ ನಿನ್ನ ಹೆಸರು ಕೇಳಿದೊಡನೆ ಹೇಳಲು” ಎನ್ನುತ್ತ ವಿಚಿತ್ರವಾಗಿ ನನ್ನನ್ನು ನೋಡತೊಡಗಿದ. ಅಲ್ಲಿಯೂ ಇನ್ನೂ ಹೆಚ್ಚು ಹೊತ್ತು ನಿಲ್ಲಲಾಗದೆ ಮನೆಯಕಡೆಯ ದಾರಿ ಹಿಡಿದೆ.
ದಾರಿಯುದ್ದಕ್ಕೂ ಎಷ್ಟೋ ದೇವರ ಚಿತ್ರಗಳನ್ನೋ , ಯಾರದೊ ಪ್ರತಿಮೆಗಳನ್ನೋ , ಅಂಗಡಿಯ ಮೇಲೆ ಜಾಹಿರಾತಿಗೆ ಹಾಕಿದ ಸಿನಿಮಾ ತಾರೆಯರ , ಕ್ರಿಕೆಟ್ ಆಟಗಾರರ ಚಿತ್ರಗಳನ್ನೆಲ್ಲ ನೋಡಿದೆ. ಆಶ್ಚರ್ಯ ಎಂದರೆ ಅವರೆಲ್ಲರ ಹೆಸರೂ ನೋಡಿದೊಡನೆಯೇ ಥಟ್ ಅಂತ ನನಗೆ ನೆನಪಿಗೆ ಬರುತ್ತಿದೆ. ಅವರೆಲ್ಲ ಸಾಧಕರು ಅಂತಲೋ ಗೊತ್ತಿಲ್ಲ. ಆದರೆ ಅವರ ಹೆಸರು ನೆನಪಾದರೂ ನನ್ನ ಹೆಸರು ಯಾಕೆ ನೆನಪಾಗಲಿಲ್ಲ  ಎಂಬುದು ಅರ್ಥವಾಗಲಿಲ್ಲ .
ಇದೇ ಯೋಚನೆಯಲ್ಲಿ ಮನೆಯನ್ನು ತಲುಪಿದೆ. ಮನೆಯೊಳಗೆ ಪ್ರವೇಶಿಸಿದ ಕೂಡಲೇ , ಇದ್ದಕ್ಕಿದ್ದಂತೆಯೇ  ಮೆದುಳಿನ ಮೂಲೆಯಲ್ಲಿ ಎಲ್ಲೋ ಹುದುಗಿದ್ದ ನನ್ನ ಹೆಸರು ಮೇಲೆದ್ದು ಬಂದಿತು. 

ಆಗಲೇ ನನಗೆ ಅರ್ಥವಾಗಿದ್ದು ಸಮಾಜದಲ್ಲಿ ನನ್ನ ಹೆಸರಿನ ಮಹತ್ವ !

ಶನಿವಾರ, ಮೇ 11, 2013

'ವಿ-ಜಯ'

    ಪಶ್ಚಿಮ ದಿಕ್ಕಿಗೆ ಸಮುದ್ರ, ಉಳಿದ ದಿಕ್ಕಿನಲ್ಲಿ ಗುಡ್ಡಗಳು ಹಾಗೂ ದಟ್ಟ ಅರಣ್ಯದಿಂದ ಸುತ್ತುವರಿದಿದ್ದ ಪ್ರದೇಶದ ರಾಜನಾಗಿದ್ದ ‘ವಿಜಯ ರಾಜ’ ನದು ವಿಲಾಸೀ ಜೀವನ. ಹಿರಿಯ ಮಗನೆಂಬ ಕಾರಣಕ್ಕೆ ವಂಶಪಾರಂಪರ್ಯವಾಗಿ ಒದಗಿ ಬಂದ ರಾಜ್ಯಕ್ಕೆ  ಪಟ್ಟಾಭಿಶಿಕ್ತನಾಗಿ ಆಗಲೇ ಹತ್ತು ವರ್ಷಗಳು ಕಳೆದಿದ್ದವು. ಭೌಗೋಳಿಕವಾಗಿ ಗುಡ್ಡ, ಬೆಟ್ಟ, ಸಮುದ್ರಗಳಿಂದ ಸುತ್ತುವರಿದು ಅಲ್ಲದೇ ಉಳಿದ ದೊಡ್ಡ ದೊಡ್ಡ ರಾಜರುಗಳ ಸಾಮ್ರಾಜ್ಯಗಳಿಂದಲೂ ದೂರವೇ ಇದ್ದರಿಂದ, ವಿಜಯರಾಜನಿಗೆ ಹೇಳಿಕೊಳ್ಳುವ ಶತ್ರುಗಳ ತೊಂದರೆಯೂ ಇರಲಿಲ್ಲ. ಹಾಗಾಗಿ ಕಲಿತಿದ್ದ ಅಲ್ಪ ಸ್ವಲ್ಪ ಶಸ್ತ್ರಾಭ್ಯಾಸವೂ ರಾಜನಿಗೆ ಮರೆತಂತಾಗಿತ್ತು. ಹೆಸರು ವಿಜಯನೆಂದು ಇದ್ದರೂ ಬೇರೆ ರಾಜ್ಯವನ್ನು ದಂಡೆತ್ತಿ ಹೋಗಿ ವಿಜಯ ಸಾಧಿಸಿ ರಾಜ್ಯ ವಿಸ್ತರಣೆಯೂ ಕನಸಿನ ಮಾತಾಗಿಯೇ ಇತ್ತು.
    ಹೀಗಿದ್ದರೂ ರಾಜ್ಯ ಇದ್ದುದರಲ್ಲಿಯೇ ಸಂಪದ್ಭರಿತವಾಗಿಯೇ ಇತ್ತು. ಈ ಭಾಗವೆಲ್ಲ ಹೆಚ್ಚಿಗೆ ಮಳೆಯಾಗುವ  ಪ್ರದೇಶವಾದ್ದರಿಂದ ಕಾಲ ಕಾಲಕ್ಕೆ ಸರಿಯಾಗಿ ಮಳೆ ಬೆಳೆಯಾಗಿ ಜನರ ಹೊಟ್ಟೆಗೆ ಏನೂ ತೊಂದರೆ ಇರಲಿಲ್ಲ. ಅಲ್ಲದೇ ರಾಜ್ಯದ ಜನರು ಇತ್ತೀಚಿಗೆ ಸಮುದ್ರ ವ್ಯಾಪಾರವನ್ನೂ ಪ್ರಾರಂಭಿಸಿದ್ದರಿಂದ ಆರ್ಥಿಕವಾಗಿಯೂ ಸುಧಾರಿಸಿದ್ದರು. ಅಲ್ಲದೇ ಬಹಳ ದೂರದಲ್ಲಿದ್ದ ದೊಡ್ಡ ದೊಡ್ಡ ಸಾಮ್ರಾಜ್ಯಗಳು  ಬೆಟ್ಟ ಗುಡ್ಡ ದಾಟಿ ಇಷ್ಟು ದೂರ ಬಂದು  ಈ ಸಣ್ಣ ರಾಜ್ಯವನ್ನು ಕಬಳಿಸಲು ಅಷ್ಟೊಂದು ಆಸಕ್ತಿ ಹೊಂದಿರಲಿಲ್ಲ. ಹೀಗಾಗಿ ಬಹಳ ವರ್ಷದಿಂದ ಯುದ್ಧದಂತಹ ವಿನಾಶದ ಭಯವಿಲ್ಲದೇ ಜನರಲ್ಲಿ ಶಾಂತಿ ನೆಮ್ಮದಿ ನೆಲೆಸಿತ್ತು. ಹೀಗೆ ವಿಜಯ ರಾಜನು ಯುದ್ಧ,ಆಕ್ರಮಣಗಳ ಭಯವಿಲ್ಲದೇ ರಾಜ್ಯ ವಿಸ್ತರಣೆಯ ಗೋಜಿಗೂ ಹೋಗದೆ ತನ್ನದೇ ಆದ ಆಪ್ತವಲಯದ ಸಾಹಾಯಕರನ್ನು , ಮಂತ್ರಿಗಳನ್ನು ನೀಮಿಸಿಕೊಂಡು ರಾಣಿ, ದಾಸಿಯರ ಜೊತೆ ವಿಲಾಸೀ ಜೀವನದಲ್ಲಿ ತೊಡಗಿಕೊಂಡಿದ್ದ. ಅಲ್ಲಲ್ಲಿ ಕಳ್ಳತನ, ದರೋಡೆ ಅಸ್ತಿ ವಿವಾದದಂತಹ ಸಮಸ್ಯೆಗಳು ಇರುತ್ತಿದ್ದರೂ ಅವೆಲ್ಲಾ ರಾಜನವರೆಗೂ ಹೋಗದೆ ಮಂತ್ರಿಗಳೇ ತಮಗನಿಸಿದಂತೆ ಪರಿಪರಿಹರಿಸುವ ಅಧಿಕಾರವನ್ನೂ ಹೊಂದಿದ್ದರು.
ವಿಜಯ ರಾಜನ ರಾಜ್ಯವನ್ನು  ದಾಟಿ ಹತ್ತಿರ ಅನ್ನುವಂತೆ ಇರುವ ರಾಜ್ಯ  ಜಯರಾಜನದು. ಈತನ ರಾಜ್ಯ ಕಡು ಬಯಲು ಸೀಮೆಯ ರಾಜ್ಯ. ಮಳೆ  ಬಂದರಷ್ಟೇ ಬೆಳೆಯೆನ್ನುವ ಪರಿಸ್ಥಿತಿ ಇಲ್ಲಿನ ಕೃಷಿಕರದು. ಹಾಗಾಗಿ ಬರಗಾಲವೆನ್ನುವುದು ಇಲ್ಲಿ ಸಾಮಾನ್ಯ ಸ್ಥಿತಿ. ಬೇರೆ ಯಾವುದೇ ಸರಿಯಾದ ಆರ್ಥಿಕ ಮೂಲವಿಲ್ಲದೇ ಜನರ ಜೀವನ ಸುಧಾರಿಸಲು ಬೇರೆ ಯಾವುದಾದರೊಂದು ಮಾರ್ಗ ಕಂಡುಕೊಳ್ಳುವ ಅನಿವಾರ್ಯತೆ ಜಯರಾಜನಿಗೆ ಒದಗಿ ಬಂದಿತ್ತು. ದೊಡ್ಡ ದೊಡ್ಡ ರಾಜ್ಯಗಳನ್ನು ಆಕ್ರಮಿಸುವ ಸಾಮರ್ಥ್ಯ ವಿಲ್ಲದ ಜಯರಾಜನಿಗೆ ಉಳಿದಿದ್ದು ‘ವಿಜಯ’ ರಾಜನ ರಾಜ್ಯ ಮಾತ್ರ. ಅಲ್ಲದೇ ಇತ್ತೀಚಿಗೆ ಸಮುದ್ರ ವ್ಯಾಪಾರವು ಬಹಳ ಲಾಭದಾಯಕವಾದ ವಾಣಿಜ್ಯ ವೃತ್ತಿಯಾಗಿ ಪ್ರಸಿದ್ದಿ ಪಡೆಯುತ್ತಿರುವುದೂ ಜಯ ರಾಜನ ಉತ್ಸಾಹಕ್ಕೆ ಮತ್ತಷ್ಟು ಇಂಬು ಬಂದಿತ್ತು. ಆದರೆ ಜಯ ರಾಜನ ಸೈನ್ಯಕ್ಕೆ ಗುಡ್ಡ ದಟ್ಟ ಅರಣ್ಯ ಗಳಿಂದ ಸುತ್ತುವರಿದಿದ್ದ ವಿಜಯ ರಾಜನನ್ನು ಆಕ್ರಮಿಸುವುದು ಕಷ್ಟದ  ಮಾತಾಗಿತ್ತು . ಇವೆಲ್ಲವನ್ನೂ ಅರ್ಥ ಮಾಡಿಕೊಂಡಿದ್ದ ಜಯರಾಜ ವರ್ಷಗಳಿಂದ ಗುಡ್ಡ ಬೆಟ್ಟಗಳಲ್ಲಿ ಯುದ್ಧ ಮಾಡುವ ತರಬೇತಿ ಕೊಡಿಸುವ ವ್ಯವಸ್ಥೆಯನ್ನ ತನ್ನ  ಸೈನ್ಯಕ್ಕೆ ಮಾಡಿಸಿದ್ದ . ಎಷ್ಟೇ ತರಬೇತಿ ನೀಡಿದ್ದರೂ ವಿಜಯ ರಾಜನನ್ನು ಸುಲಭವಾಗಿ ಗೆಲ್ಲುವ ಆತ್ಮ ವಿಶ್ವಾಸ ಇನ್ನೂ ಜಯರಾಜನಲ್ಲಿ ನೆಲೆಸಿರಲಿಲ್ಲ. ಆದರೆ ಈ ವರ್ಷ ರಾಜ್ಯದಲ್ಲಿ ದಟ್ಟ ಬರಗಾಲ ಆವರಿಸಿತ್ತು. ಜನರು ನೀರು ಆಹಾರಕ್ಕೆ ಪರಿತಪಿಸುತ್ತಿದ್ದರು. ಜನರ ಸಹನೆ ಮೀರಿತ್ತು. ಇಂಥಹ ಜನರ ಅಸಹನೆಯನ್ನು ಅಸ್ತ್ರವನ್ನಾಗಿಸಿ ಇನ್ನಷ್ಟು  ಪ್ರಜೆಗಳನ್ನು ಸೈನ್ಯಕ್ಕೆ ಸೇರಿಸಿ ಹೀಗಾದರೂ ವಿಜಯ ರಾಜನನ್ನು ಗೆಲ್ಲಲೇ ಬೇಕೆಂಬ ಸಂಕಲ್ಪಕ್ಕೆ ಜಯರಾಜ ಬಂದಿದ್ದ.
     ದತ್ತಣ್ಣ ವಿಜಯರಾಜನ ರಾಜ್ಯವನ್ನು ಸುತ್ತುವರಿದ ಗುಡ್ಡ ಗಾಡಿನಲ್ಲಿ ಹುಟ್ಟಿ ಬೆಳೆದ ಹುಡುಗ. ಚಿಕ್ಕಂದಿನಲ್ಲಿಯೇ ಗುಡ್ಡ ಬೆಟ್ಟಗಳಲ್ಲಿ ಓಡಾಡಿ ಅಲ್ಲಿನ ಮೂಲೆ ಮೂಲೆಯನ್ನೂ, ಕಾಲು ದಾರಿ, ನದಿ, ಕೊಳ ಹೀಗೆ ಎಲ್ಲದರ ಬಗ್ಗೆಯೂ ಬಲ್ಲವನಾಗಿದ್ದ. ಕಾಡಿನ ಒಂದು ಭಾಗವೇ ಎಂಬಂತೆ ಬೆಳೆದಿದ್ದ ದತ್ತಣ್ಣನಿಗೆ ತಂದೆ ತಾಯಿಯರ ಒತ್ತಾಸೆಯಂತೆ ರಾಜ್ಯದ ಗಡಿ ಕಾಯುವ ಸೈನ್ಯದ ಭಾಗಕ್ಕೆ ಸೇರಿದ್ದ. ದತ್ತಣ್ಣನಿಗೆ ಸೈನ್ಯ ಸೇರುವುದು ಅಷ್ಟೊಂದು ಇಷ್ಟವಿಲ್ಲದಿದ್ದರೂ, ತಂದೆ ತಾಯಿಯರಿಗೆ ತಮ್ಮ ಮಗ ರಾಜ್ಯದ ರಕ್ಷಣೆಗೆ ಸೇರುವುದು ತಮ್ಮ ಸುಭಾಗ್ಯವೆಂದು ತಿಳಿದಿದ್ದರು. ದತ್ತಣ್ಣನಿಗೆ ಆರಂಭದಲ್ಲಿ ಸೈನ್ಯ ಅಷ್ಟಾಗಿ ಹಿಡಿಸದಿದ್ದರೂ ಸಮಯ ಸಾಗಿದಂತೆ ಅಲ್ಲಿನ ಶಿಸ್ತು, ಸಾಹಸಗಳಿಗೆ ಮಾರುಹೋಗ ತೊಡಗಿದ. ಬಹು ಭಾಗ ಈತನ ಸೈನ್ಯದ ಕೆಲಸ  ಗುಡ್ಡ ಬೆಟ್ಟ ಗಳಲ್ಲೇ ಇರುತ್ತಿದ್ದುದರಿಂದ ಅಲ್ಲದೇ ಇಲ್ಲಿನ ಗುಡ್ಡ  ಬೆಟ್ಟಗಳ ಪರಿಚಯದ ಜೊತೆಗೆ ಹುಟ್ಟು ಸಾಹಸಿಯಾಗಿದ್ದ ದತ್ತಣ್ಣನಿಗೆ ಕಾಲ ಕ್ರಮೇಣ ಸಹಜ ವಾಗಿಯೇ ಸೈನ್ಯದಲ್ಲಿ ವಿಶೇಷ ಸ್ಥಾನ ಸಿಕ್ಕಿತು . ಕಾಡು ಮೇಡು ಸುತ್ತದೆ ನಗರದಲ್ಲಿ ಸುಖವಾಗಿದ್ದ ಅಲ್ಲಿನ ಬಹುಪಾಲು ಸೈನಿಕರಿಗೆ ದತ್ತಣ್ಣನೆ ಗುರುವಂತಾಗಿದ್ದ. ಕಾಡಿನಲ್ಲಿ ಎಲ್ಲಿ ಹೋಗಬೇಕು, ಎಲ್ಲಿ ಹೋಗಬಾರದು, ಯಾವ ದಾರಿಯಲ್ಲಿ ಯಾವ ದಿಕ್ಕಿನಲ್ಲಿ ಸಾಗಬೇಕು, ಹೀಗೆ ಎಲ್ಲದ್ದಕ್ಕೂ ದತ್ತಣ್ಣನೆ ಅವರಿಗೆ ಮಾರ್ಗದರ್ಶಕ ನಾಗಿದ್ದ. ಹೀಗಾಗಿ ಈ ಸಣ್ಣ ಗಡಿ  ಕಾಯುವ ಸೈನ್ಯದ ಬಹುಪಾಲು ಸೈನಿಕರಿಗೆ  ದತ್ತಣ್ಣನೆ ಮುಖಂಡನಾಗಿ ಬೆಳೆಯ ತೊಡಗಿದ್ದ. ದತ್ತಣ್ಣನಿಲ್ಲದಿದ್ದರೆ ಮುಂದೆ ಏನು ಮಾಡಬೇಕೆಂದು ದಿಕ್ಕು ತೋಚದಂತೆ ಬಹುಪಾಲು ಸೈನಿಕರಿಗೆ ಅನಿಸುವುದರಷ್ಟು ಮಟ್ಟಿಗೆ ಅವರು ದತ್ತಣ್ಣನನ್ನು ಅವಲಂಬಿಸುವಂತಾಗಿದ್ದರು.
    ಜಯರಾಜನು ತನ್ನ ಸೈನ್ಯದೊಡನೆ ಆಕ್ರಮಿಸಲು ಸಿದ್ದನಾಗಿ ರಾಜ್ಯದ ಗಡಿಯ ಹತ್ತಿರಕ್ಕೆ ಸಮೀಪಿಸುತ್ತಿದ್ದಾನೆ ಎನ್ನುವ ಸುದ್ದಿ ಕೇಳಿದೊಡನೆಯೇ  ‘ವಿಜಯರಾಜ’ ಹೌಹಾರಿದ . ಯುದ್ದ ಮಾಡುವ ಮಾತಿರಲಿ, ಯುದ್ದ ಹೀಗಿರುತ್ತದೆಯೆಂದು ಬರಿ ಕಥೆಗಳಲ್ಲೇ ಕೇಳಿ ತಿಳಿದಿದ್ದ ವಿಜಯರಾಜನಿಗೆ  ನಿಜವಾದ ಕತ್ತಿ ಹಿಡಿದು ತನ್ನ ಪರಾಕ್ರಮ ತೋರಿಸುವ ಮಾತು ಬಹುದೂರವೇ ಇತ್ತು. ಚಿಕ್ಕಂದಿನಲ್ಲಿ ಒಂದಿಷ್ಟು ಶಸ್ತ್ರಾಭ್ಯಾಸದ ತರಬೇತಿ ಪಡೆದಿದ್ದು ಬಿಟ್ಟರೆ ‘ಕ್ಷತ್ರಿಯನ  ಪರಾಕ್ರಮ’ ಎಂಬ ಮಾತೆಲ್ಲ ತನ್ನ ರಾಣಿ, ದಾಸಿಯರ ಮೇಲಷ್ಟೇ ಇತ್ತು. ತಕ್ಷಣವೇ ರಾಜ ಸಭೆ ಕರೆದು ಮಂತ್ರಿ, ಸೈನ್ಯಾಧಿಕಾರಿ ಯರಲ್ಲಿ  ಯುಧ್ಧವನ್ನು ತಪ್ಪಿಸುವ ದಾರಿಹುಡುಕುವ ಪ್ರಯತ್ನ ನಡೆಯಿತಾದರೂ , ಕೊನೆಯಲ್ಲಿ ಯುದ್ದ ಮಾಡದೇ ಬೇರೆ ದಾರಿ ಹೊಳೆಯಲಿಲ್ಲ.  ಈಗ ವಿಜಯರಾಜನಿಗೆ ಯುದ್ಧ ಮಾಡದೇ ಬೇರೆ ಗತ್ಯಂತರವೇ ಇರಲಿಲ್ಲ.
    ವಿಜಯರಾಜನ ಸೈನ್ಯ ತೀರ ಚಿಕ್ಕದಲ್ಲದಿದ್ದರೂ ಸರಿಯಾದ ತರಬೇತಿಯಿಲ್ಲದೇ ಅದು ಇವರ ಎರಡರಷ್ಟಿರುವ ಜಯರಾಜನ ಸೈನ್ಯಕ್ಕೆ ಸರಿಸಮನಾಗಿ ಹೊರಾಡುವ ಮಟ್ಟಿಗೆ ಇದ್ದಂತೆ ಕಾಣಿಸುತ್ತಿರಲಿಲ್ಲ. ಅಲ್ಲಿನ ಬಹುಪಾಲು ಸೈನಿಕರಿಗೆ ಇದು ಮೊದಲನೆಯ ಯುದ್ದವೇ ಆಗಿತ್ತು. ಹೀಗಿದ್ದರೂ ತಮ್ಮನ್ನು ರಕ್ಷಿಸಲು ಸುತ್ತುವರಿದ  ಆ ಗುಡ್ಡ ಬೆಟ್ಟಗಳನ್ನು ನೆನೆದು ಸ್ವಲ್ಪ ಧೈರ್ಯ ವಿಶ್ವಾಸ ಅವರಲ್ಲಿ ಮೂಡಿತ್ತು. ಇವರ ಜೊತೆ ವಿಜಯರಾಜನು ಅಳುಕುತ್ತಲ್ಲೇ ಸೈನ್ಯದ ಜೊತೆ ಸಾಗಿದ್ದ.
    ಜಯರಾಜನ ಸೈನ್ಯದಲ್ಲಿ ಕೆಲವು ಸಾಹಸವಂತರೂ ಬಲಶಾಲಿಗಳೂ ಇದ್ದರು. ಹಿಂದೆಂದೂ ಸೇರದ ಸಂಖ್ಯೆಯಲ್ಲಿ ಪ್ರಜೆಗಳು ಜಯರಾಜನ ಸೈನ್ಯವನ್ನು ಸ್ವ ಇಚ್ಚೆಯಿಂದ  ಸೇರಿದ್ದರು.  ಅವರಿಗೆ ಎಲ್ಲರಿಗೂ ಯುದ್ದದ ತರಬೇತಿ ನೀಡಲಾಗಿದ್ದರೂ ಹಲವರಿಗೆ ಇದು ಮೊದಲ ಯುದ್ದವಾದ್ದರಿಂದ ಸಹಜವಾದ ಅಳುಕು ಇದ್ದೇ ಇತ್ತು. ಅಲ್ಲದೇ ಎಲ್ಲರಿಗೂ ಇಂತಹ ಗುಡ್ಡ, ಕಾಡು ಮೇಡುಗಳಲ್ಲಿ ವೈರಿಗಳನ್ನು ಎದುರಿಸುವ  ತಂತ್ರಗಾರಿಕೆಯೂ ಹೊಸದೇ ಆಗಿತ್ತು. ಅಲ್ಲಿನ  ಗುಡ್ಡ ಬೆಟ್ಟಗಳಲ್ಲಿ ಸಾಗುವ ಕೆಲವೊಂದು ಮುಖ್ಯ ರಸ್ತೆಗಳು ಗೊತ್ತಿತ್ತೆ ಹೊರತು ಒಳದಾರಿಗಳು , ಕಾಡಿನಲ್ಲಿಯ ದಿಕ್ಕುಗಳು, ಎಲ್ಲೆಲ್ಲಿ ವೈರಿಗಳು ಅವಿತು ಆಕ್ರಮಣ  ಮಾಡ ಬಹುದಾದ ಸಂಭವ ಇದೆ ಇಂಥಹ ಸೂಕ್ಷ್ಮ ವಿಷಯಗಳ ಬಗ್ಗೆ ಕೂಲಂಕುಷ ವಾಗಿ ತಿಳಿದವರು ಜಯರಾಜನ ಸೈನ್ಯದಲ್ಲಿ ಇಲ್ಲವೇ ಇರಲಿಲ್ಲ. ಆದರೂ ಜಯರಾಜನಿಗೆ ವಿಜಯರಾಜನಿಗಿಂತ ದೊಡ್ಡ ಸಂಖ್ಯೆಯಲ್ಲಿ ಇರುವ ತನ್ನ ಸೈನ್ಯದ ಬಗ್ಗೆ ಆತನಲ್ಲಿ ಈಗ ವಿಶ್ವಾಸ ಬೆಳೆದಿತ್ತು. ಅಲ್ಲದೇ ಯುದ್ದ ಮಾಡಿಯೇ ಗೊತ್ತಿಲ್ಲದ ವಿಜಯರಾಜನ ಬಗ್ಗೆಯೂ, ಆತನ ಸೈನಿಕರೆಲ್ಲ ಸರಿಯಾದ ತರಬೇತಿಯಿಲ್ಲದೇ ಸೈನ್ಯ ಆತನ ಹದ್ದುಬಸ್ತಿನಲ್ಲಿ ಇಲ್ಲ ಎನ್ನುವುದನ್ನೂ ಆತ ಅರಿತಿದ್ದ. ಹೀಗಾಗಿ ಆತನ ವಿಶ್ವಾಸ ಈ ಸಾರಿ ಇಮ್ಮಡಿಸಿತ್ತು.
    ಜಯರಾಜ ತನ್ನ ಸೈನ್ಯದೊಡನೆ ಆಕ್ರಮಿಸುತ್ತಿದ್ದಾನೆ ಎಂಬ ಮುನ್ಸೂಚನೆ ದೊರೆಯುತ್ತಿದ್ದಂತೆ, ದತ್ತಣ್ಣನ ಪಡೆ ಆಗಲೇ ಎಲ್ಲೆಲ್ಲಿ ಹೇಗೆ ಕಾಡಿನಲ್ಲಿ ಆಕ್ರಮಣ ಮಾಡಿ ವೈರಿಗಳನ್ನು ಕಂಗೆಡಿಸಬೇಕೆಂದು ನಿರ್ಧರಿಸಿದ್ದರು. ಆಗಲೇ ಅದಕ್ಕೆ  ಅನುಸಾರವಾಗಿ ದತ್ತಣ್ಣ ಕಾಡಿನ ಆಯಕಟ್ಟಿನ ಸ್ಥಳಗಳನ್ನು ಗೊತ್ತುಮಾಡಿ ರಣತಂತ್ರವನ್ನು ರೂಪಿಸಿದ್ದ. ತನ್ನ ಬಳಗವನ್ನು ಸಣ್ಣ ಸಣ್ಣ ಗುಂಪುಗಳನ್ನಾಗಿ ಮಾಡಿ ಅವರು ಕಾಡಿನಲ್ಲಿ ಅಕಸ್ಮಾತಾಗಿ ಎರಗುವುದು, ಶತ್ರು ಸೈನಿಕರು ಉಪಾಯವಾಗಿ ದಾರಿ ತಪ್ಪುವಂತೆ  ಮಾಡುವುದು,  ರಾತ್ರಿಯಲ್ಲಿ ಅವರು ಕಾಡಿನ ಪರಿಚಯವಿಲ್ಲದೇ ದಿಕ್ಕುತಪ್ಪಿದಾಗ ಅವರ ಮೇಲೆರಗಿ  ಅವರನ್ನು ಮಣಿಸುವುದು. ಹೀಗೆ ಬೇರೆ ಬೇರೆ ತಂತ್ರಗಾರಿಕೆಯನ್ನ ದತ್ತಣ್ಣ ನಿರೂಪಿಸಿದ್ದ.  ಇದರ ಜೊತೆಗೆ ಅಲ್ಲಿನ ಗುಡ್ಡ ಗಾಡಿನ ಸಮಗ್ರ ಪರಿಚಯವಿದ್ದ ದತ್ತಣ್ಣನಿಗೆ ಅವನ ಸೈನ್ಯದ ಮುಖ್ಯಸ್ಥನು  ವಿಜಯರಾಜನ ಜೋತೆಗೂಡಿ ಯುಧ್ಧ ಮಾಡಲು ವಿಶೇಷ ಶಿಫಾರಸ್ಸನ್ನು ಸೇನಾಪತಿಗೆ ಕಳುಹಿಸಿದ್ದ.  ಸಹಜವಾಗಿ ಇಲ್ಲಿನ ಕಾಡು ಮೇಡಿನ ಪರಿಚಯದ ಜೊತೆಗೆ ವೀರನೂ, ಸಾಹಸಿಯೂ ಆದ ದತ್ತಣ್ಣ ನಂತವರ ಸಹಾಯ ಸೇನಾಪತಿಗೆ ಬೇಕಾದ್ದರಿಂದ ದತ್ತಣ್ಣನಿಗೆ ಮಹಾರಾಜನ ಜೊತೆಗೂಡಿ ಅಲ್ಲಿನ ಯುದ್ಧತಂತ್ರ ರೂಪಿಸಿವ ಅವಕಾಶವೂ ಒದಗಿ ಬಂತು. ದತ್ತಣ್ಣ ಅದು ತನಗೆ ಸಿಕ್ಕ ಸೌಭಾಗ್ಯವೆಂದೂ, ಮಹಾಗೌರವವೆಂದೂ ಭಾವಿಸಿದ.  ತಾನು ಮೊದಲೇ ರೂಪಿಸಿದ ಯೋಜನೆಯಂತೆ ಕಾಡಿನಲ್ಲಿ ಶತ್ರುಗಳ ದಿಕ್ಕುತಪ್ಪಿಸಿ ಯುಧ್ಧಮಾಡುವಂತೆ ತನ್ನ ಸಹಚರರನ್ನು ನಿಯೋಜಿಸಿ, ತಾನು ವಿಜಯರಾಜನ  ದೊಡ್ಡದಾದ ಸೈನ್ಯದ ಗುಂಪಿನ ಜೊತೆ ಸೇರಿ, ಯುಧ್ಧ ತಂತ್ರ ರೂಪಿಸಿ, ಕಾದಾಡಲು ಹೊರಡಲು ಅಣಿಯಾದ.
ದತ್ತಣ್ಣನ ಸೂಚನೆಯಂತೆ ವಿಜಯರಾಜ ಹಾಗೂ ಆತನ ಸೇನಾಧಿಪತಿ ಜೊತೆಗೂಡಿ  ಎಲ್ಲೆಲ್ಲಿ, ಯಾವ ರೀತಿ ಬೆಟ್ಟ ಗುಡ್ಡದ ಕಡಿದಾದ ರಸ್ತೆಗಳಲ್ಲಿ, ಆಯಕಟ್ಟಿನ ಸ್ಥಳಗಳಲ್ಲಿ  ಜಯರಾಜನ ಸೈನಿಕರು ಚಲಿಸುವಾಗ ಆಕ್ರಮಣ ಮಾಡಬೇಕು.  ಹೇಗೆ ಉಪಾಯವಾಗಿ ಶತ್ರು ಸೈನಿಕರ ದಿಕ್ಕುತಪ್ಪುವಂತೆ ಮಾಡಬೇಕು, ಎಲ್ಲೆಲ್ಲಿ ಅನುಭವವಿರುವ ಸೈನಿಕರನ್ನು ಯಾವ ಯಾವ ರೀತಿ ನಿಯೋಜಿಸಬೇಕು ಎಂಬೆಲ್ಲ ನಿರ್ಧಾರಕ್ಕೆ ಬರಲಾಯಿತು. ಅಲ್ಲದೇ ದತ್ತಣ್ಣನು ಯುಧ್ಧದಲ್ಲಿ  ರಾಜನ ಬೆಂಗಾವಲಿಗೆ ನಿಲ್ಲಬೇಕೆಂದೂ ನಿರ್ಣಯಿಸಲಾಯಿತು.
    ಜಯರಾಜನ ಪಡೆ ರಾಜ್ಯದ ಗಾಡಿಯಲ್ಲಿ ಒಳ ನುಗ್ಗುತ್ತಿದ್ದಂತೆ, ದತ್ತಣ್ಣನ ಉಪಾಯದಂತೆ ವಿಜಯರಾಜನ ಪಡೆಯ ಸೈನಿಕರು ಗುಡ್ಡ ಬೆಟ್ಟಗಳ ಆಯಕಟ್ಟಿನ ಜಾಗಗಳಲ್ಲಿ ಅವರ ಮೇಲೆರಗಿ ಅವರನ್ನು ಕಕ್ಕಾಬಿಕ್ಕಿಯನ್ನಾಗಿ ಮಾಡಿತು.  ದಿಕ್ಕುತಪ್ಪಿದವರಂತೂ ಏನು ಮಾಡಬೇಕೆಂದು ತೋಚದೇ ಸುಲಭವಾಗಿ ವಿಜಯರಾಜನ ಸೈನಿಕರಿಗೆ ತುತ್ತಾದರು. ಹೀಗೆ ಅಚಾನಕ್ಕಾಗಿ ಎಲ್ಲಿಂದಲೋ  ಎರಗಿ ಬರುವ ಸೈನಿಕರನ್ನು ನಿಯಂತ್ರಿಸುವುದು ಅಲ್ಲಿನ ಪ್ರದೇಶದ ಅರಿವಿಲ್ಲದ ಜಯರಾಜನ ಕಡೆಯ ಸೈನಿಕರಿಗೆ ಕಷ್ಟದ ಕೆಲಸವಾಗತೊಡಗಿತು. ಹೀಗಿದ್ದರೂ ಜಯರಾಜ ಮಾತ್ರ ದೃತಿಗೆಡಲಿಲ್ಲ. ಅವನ ದೊಡ್ಡ ಪ್ರಮಾಣದಲ್ಲಿದ್ದ  ಸೈನಿಕರು ಮುನ್ನುಗ್ಗುತ್ತಲೇ ಇದ್ದರು. ಆಗಲೇ ಆತನ ಸೈನ್ಯ ಕಾಡಿನ ಅರ್ಧ ಭಾಗದಷ್ಟು ಕ್ರಮಿಸಿ ಆಗಿತ್ತು.  ಇದನ್ನು ಅರಿತ ವಿಜಯರಾಜನ ಸೇನಾಧಿಪತಿ ಹಾಗೂ ದತ್ತಣ್ಣ, ಈಗಲೇ ಇವರನ್ನು ತಡೆಯದಿದ್ದರೆ  ಮುಂದೆ ದೊಡ್ಡ ಪ್ರಮಾಣದ ಅವರ  ಸೈನ್ಯವನ್ನು ಈ ಗುಡ್ಡ ಬೆಟ್ಟವನ್ನು ದಾಟಿದ ಮೇಲೆ ನಿಯಂತ್ರಿಸುವುದು ಅಸಾಧ್ಯ ಎಂದು ಅರಿತು ತಮ್ಮೆಲ್ಲ ಸೈನಿಕರನ್ನು ಒಗ್ಗೂಡಿಸಿ  ಜಯರಾಜನ ಮೇಲೆರಗಲು ಮುಂದಾದರು.
    ಕಾಡಿನ ಒಂದಿಷ್ಟು ಸಮತಟ್ಟಾದ ಭಾಗದಲ್ಲಿ ಬೀಡುಬಿಟ್ಟಿದ್ದ ಜಯರಾಜನ  ಸೈನ್ಯದ ಮೇಲೆ ವಿಜಯ ರಾಜನ ಪಡೆ ಒಮ್ಮೆಲೇ ಆಕ್ರಮಣ ಮಾಡಿತು.  ಜಯರಾಜನ ಸೈನ್ಯವನ್ನು ದೂರದಿಂದಲೇ ನೋಡಿ ಬೆಚ್ಚಿಬಿದ್ದಿದ್ದ ವಿಜಯರಾಜ, ಸಂಪೂರ್ಣ ಯುಧ್ದವನ್ನು ಸೇನಾಪತಿಗೆ, ದತ್ತನಿಗೆ ಬಿಟ್ಟು ಅಲ್ಲಲ್ಲಿ ತಪ್ಪಿಸಿಕೊಂಡು ಓಡಾಡುತ್ತಿದ್ದ.  ಇದನ್ನು ಗಮನಿಸಿದ ಜಯರಾಜ, ಇದೇ ಸರಿಯಾದ ಸಂಧರ್ಭವೆಂದು ಎಣಿಸಿ ಬದಿಯಲ್ಲಿ ಎಲ್ಲೋ ಮರೆಯಲ್ಲಿ ನಿಂತು ಯುಧ್ದ ಮಾಡಿದವನಂತೆ ತೋರ್ಪಡಿಸಿಕೊಳ್ಳುತ್ತಿದ್ದ  ವಿಜಯರಾಜನ ಮೇಲೆ ಜಯರಾಜ ಎರಗಿದ. ವಿಜಯರಾಜ ದಿಕ್ಕುತೋಚದಂತಾಗಿ ಇನ್ನೇನು ಜಯರಾಜನಿಗೆ ಬಲಿಯಾಗುತ್ತಾನೆ  ಎನ್ನುವಾಗಲೇ ಎಲ್ಲಿಂದಲೋ ಮಿಂಚಿನ ವೇಗದಲ್ಲಿ ದತ್ತಣ್ಣ ನುಗ್ಗಿ ಜಯರಾಜನಿಗೆ ಎದುರಾದ. ಇಬ್ಬರೂ ಸಮ ಬಲದ ವೀರರು. ಯಾರು ಗೆಲ್ಲಬಹುದು ಎನ್ನುವುದನ್ನು ಊಹಿಸುವುದು ಕಷ್ಟ.  ದತ್ತಣ್ಣನಿಗೆ ಆತನ ಯೌವನದ ಉತ್ಸಾಹದ ಮೇಲುಗೈ ಇದ್ದರೆ, ಎದೆಷ್ಟೋ ಯುದ್ದ ಮಾಡಿದ್ದ ಜಯರಾಜನಿಗೆ ಆತನ ಅನುಭವವೇ ಆಸರೆ.  ಇವರಿಬ್ಬರ ಕಾದಾಟವನ್ನು ನೋಡುವುದನ್ನು ಬಿಟ್ಟರೆ ವಿಜಯರಾಜನಿಗೆ ಬೇರೇನನ್ನೂ  ಮಾಡಬೇಕೆಂದು ತೋಚಲಿಲ್ಲ. ಸಮಬಲದ ಕಾದಾಟದಲ್ಲಿ ಇದ್ದಕ್ಕಿದಂತೆ  ತನ್ನ ವಿಶಿಷ್ಟ  ಬಗೆಯ ಚಾಕಚಕ್ಯತೆಗಳಿಂದ  ದತ್ತಣ್ಣನನ್ನು ಕಂಗೆಡಿಸಿ ಆತ ಆಯತಪ್ಪಿದಾಗ , ಜಯರಾಜ ಕ್ಷಣಾರ್ಧದಲ್ಲಿ  ಅವನ ಮೇಲೆರಗಿ ದತ್ತಣ್ಣನ ಎದೆಗೆ ತನ್ನ ಖಡ್ಗವನ್ನು ಇರಿದ. ಕಂಗೆಡದ ದತ್ತಣ್ಣ, ಜಯರಾಜನಿಗೂ ಬದಿಯಿಂದ ತಿವಿದ. ಆದರೆ ಜಯರಾಜನ ಬಲವಾದ ಇರಿತಕ್ಕೆ ದತ್ತಣ್ಣ ಕುಸಿಯತೊಡಗಿದ, ಆತನ ಕಣ್ಣುಗಳಲ್ಲಿ ಕತ್ತಲೆ ಆವರಿಸತೊಡಗಿತು. ಕೈಯಲ್ಲಿ ಶಕ್ತಿಗುಂದಿ ಹಿಡಿದಿದ್ದ ಖಡ್ಗ ನೆಲಕ್ಕುರುಳಿತು. ಆತನ ದೇಹ ಆಯತಪ್ಪಿ ನೆಲಕ್ಕುರುಳಿತು. ಜಯರಾಜನಿಗೆ ಅಷ್ಟೊಂದು ಬಲವಾದ ಪೆಟ್ಟು ಬೀಳದಿದ್ದರೂ ಪಕ್ಕಕ್ಕೆ ಇರಿದಿದ್ದರಿಂದ ಆತನ ಕೈಯಲ್ಲಿ, ದೇಹದಲ್ಲಿ  ಶಕ್ತಿಗುಂದಿ, ಆತ ನೆಲಕ್ಕೆ ಕುಳಿತು ಸಾವರಿಸಿಕೊಳ್ಳ ತೊಡಗಿದ. ಆದರೆ ಇದ್ದಕ್ಕಿದ್ದಂತೆ, ಇಷ್ಟೊತ್ತು ಹಿಂಬದಿಗೆ ನಿಂತು ಇವರಿಬ್ಬರ ಕಾಳಗ ನೋಡುತ್ತಿದ್ದ ವಿಜಯರಾಜ, ಜಯರಾಜನ ಮೇಲೆರಗಿ ಆತನಿಗೆ ಬಲವಾಗಿ ಇರಿದ. ಜಯರಾಜ ಕ್ಷಣಾರ್ಧದಲ್ಲಿ ನೆಲಕ್ಕುರುಳಿದ.

Image Source: Internet

    ಜಯರಾಜನು ವಿಜಯರಾಜನ  ಕೈಯಿಂದ  ಹತನಾದನೆಂಬ  ವಾರ್ತೆ ಹಬ್ಬುತ್ತಿದ್ದಂತೆ, ಜಯರಾಜನ ಸೈನ್ಯವೆಲ್ಲ ದಿಕ್ಕಾಪಾಲಾಗಿ ಓಡಿತು. ವಿಜಯರಾಜನ ಸೈನಿಕರೆಲ್ಲ  ಗೆಲುವಿನ ಹರ್ಷೋದ್ಗಾರ ಮಾಡಿದರು. ಇದ್ದಕ್ಕಿದ್ದಂತೆ ಎಲ್ಲೆಲ್ಲೂ  ವಿಜಯರಾಜನಿಗೆ ಜೈಕಾರ ಮೊಳಗಿದವು. ನಗರದಲ್ಲಂತೂ ವಿಜಯರಾಜನನ್ನು ಪ್ರಜೆಗಳೆಲ್ಲ ತಮ್ಮನ್ನು ರಕ್ಷಿಸಿದ ದೇವರು ಎನ್ನುವ ರೀತಿಯಲ್ಲಿ ಸ್ವಾಗತಿಸಿದರು. ವಿಜಯರಾಜನ ಸಾಹಸ ಶೌರ್ಯದಬಗ್ಗೆ ಗುಣಗಾನಗಳು  ನಡೆದವು. ಆತ ಜಯರಾಜನನ್ನು ಮಣಿಸಿದ ಸಾಹಸದ ಬಗ್ಗೆ, ಯುಧ್ದ ಕೌಶಲ್ಯದ ಬಗ್ಗೆ  ವಿವಿಧ ಕಥೆಗಳು ರಚಿತವಾಯಿತು. ಜೊತೆಗೆ ಸೇನಾಪತಿಯೂ, ಆತನ ಸಾಹಸವೂ ಪ್ರಶಂಸೆಗೆ ಪಾತ್ರವಾಯಿತು.  ಈ ಮಹಾವಿಜಯದ ಬಗ್ಗೆ ಶಾಸನಗಳು ರಚಿತವಾದವು. ಮುಂದೆ ಅದೆಷ್ಟೋ ತಲೆಮಾರಿನ ಇತಿಹಾಸಕಾರರು  ವಿಜಯರಾಜನ ಪರಾಕ್ರಮವನ್ನು ಅಧ್ಯಯನಮಾಡಿ ಕೊಂಡಾಡಿದರು.
    ದತ್ತಣ್ಣನ ಆತ್ಮ ಮಾತ್ರ ಕರ್ತವ್ಯವೆಂದೂ, ರಾಜನೇ ಪತ್ಯಕ್ಷ ದೇವರೆಂದೂ  ಬಗೆದು ಹೋರಾಡಿ ಮಡಿದು ಇತಿಹಾಸದಲ್ಲಿ ಮರೆಯಾದ  ಅದೆಷ್ಟೋ ಸಾಮಾನ್ಯ ಸೈನಿಕರ ಜೊತೆ ಸೇರಿತ್ತು !

ಭಾನುವಾರ, ಜನವರಿ 20, 2013

ಬದಲಾದ ಕಾಲ !!


    ರಾಮಭಟ್ಟರದು ಹಳೆ ಕಾಲದ ಮಣ್ಣಿನ ಗೋಡೆಯ, ಹೆಂಚು ಹೊಡೆಸಿದ, ಮಾಳಿಗೆಯ ಮನೆಯಾದರೂ ತಕ್ಕಮಟ್ಟಿಗೆ ಗಟ್ಟಿಯಾಗಿಯೇ ಇತ್ತು. ಮನೆಯ ಪ್ರಾಂಗಣದಿಂದ ಶುರುವಾಗಿ ಮಧ್ಯದಲ್ಲಿ ದೇವರ ಮನೆ, ಪಕ್ಕದಲ್ಲಿ ಜಗುಲಿ, ಅತ್ತ ಹಿತ್ತಲಕೋಣೆಯಿಂದ ಅಡುಗೆಮನೆಯವರೆಗೂ ಹರಡಿರುವ ನುಣುಪಾದ, ಹೊಳೆಯುವ ತಣ್ಣನೆಯ ಕೆಂಪು ನೆಲ. ಮನೆಯ ಮುಂಭಾಗಕ್ಕೆ ಹಾಕಿದ ನೀಲಿ ಬಣ್ಣದ ಕಟಾಂಜನ.  ಬೀಟೆ ಸಾಗವಾನಿ ಮರದಲ್ಲಿ ಕುಸುರಿ ಕೆತ್ತನೆಯ ವಾಸ್ತು ಬಾಗಿಲು. ಅದಕ್ಕೆ ಅನುರೂಪವೋ ಎಂಬಂತೆ ಬಾಗಿಲಿನ ಸುತ್ತಲೂ ಗೋಡೆಗೆ ಬಿಡಿಸಿದ ಕೆಂಪು ಬಿಳುಪು ಹಸಿರು ಬಣ್ಣದ ಹೂವು ಬಳ್ಳಿಗಳ ಚಿತ್ರಗಳು ಕೆಲವರ್ಷದ ಹಿಂದಷ್ಟೇ ಹಿರಿಮಗನ ಮದುವೆಗೆ ಗೋಡೆಗೆ ಬಳಿದು ಮಸುಕಾದ ತಿಳಿ ನೀಲಿ ಬಣ್ಣದ ಮೇಲೆ ಎದ್ದು ಕಾಣುತ್ತಿದ್ದವು. ಮನೆಯ ಎದುರಿನ ಅಂಗಳದಲ್ಲಿ ಆರು ಗಟ್ಟಿ ಮುಟ್ಟಾದ ಹಳೆ ಸಾಗವಾನಿ ಮರದ ಕಂಬಕ್ಕೆ ಮಳೆಗಾಲದ ಗಾಳಿ ಮಳೆಗೆ ಮುರಿದು ಬಿದ್ದ ಅಡಿಕೆ ಮರದ ಬುಡದ ಭಾಗ ಕತ್ತರಿಸಿ ಅಡ್ಡಡ್ಡ ಹಾಕಿ, ಅದರ ಮೇಲೆ ಇನ್ನುಳಿದ ಅಡಿಕೆ ಮರದಿಂದ ಮಾಡಿದ ದಬ್ಬೆಯನ್ನು ಹೊದೆಸಿ, ಕತ್ತದ ಬಳ್ಳಿಯಿಂದ ಅದನ್ನು ಒಂದಕ್ಕೊಂದು ಬಿಗಿಯಾಗಿ ಕಟ್ಟಿ, ಗಟ್ಟಿ ಮಾಡಿದ ಅಡಿಕೆ ಅಟ್ಟ. ಈ ವರ್ಷ ಅಡಿಕೆ ಕೊಯ್ಲು ಸ್ವಲ್ಪ ಜಾಸ್ತಿ ಬಂದದ್ದರಿಂದ ಅಡಿಕೆ ಅಟ್ಟವೆಲ್ಲ ಕೊನೆಯಿಂದ ತುಂಬಿ, ಮನೆಯ ಮುಂಭಾಗದ ಹೆಂಚಿನ ಮಾಡಿನ ಮೇಲೂ ಒಂದಿಷ್ಟು ಕೊನೆಯನ್ನು ಹೇರಿ ಬಿಸಿಲು ತಾಗಿ ಒಣಗುವಂತೆ ಮಾಡಿದ್ದರು. ಹೀಗೆ ಒತ್ತಾಗಿ ಅಡಿಕೆ ಕೊನೆಯನ್ನು ಹೇರಿದ್ದರೂ, ಅಲ್ಲಲ್ಲಿ ಅಡಿಕೆ ಕೊನೆ, ದಬ್ಬೆಗಳ ಮಧ್ಯದಿಂದ ಸೂರ್ಯನ ಬೆಳಕು ನುಸುಳಿಬಂದು, ಮನೆಯ ಸಗಣಿಯಿಂದ ಸಾರಿಸಿದ ಅಂಗಳದಲ್ಲಿ ಬಗೆ ಬಗೆಯ ಬೆಳಕಿನ ಚಮತ್ಕಾರಿಕ ಚಿತ್ರಗಳನ್ನು ಯಾವ ದೊಡ್ಡ ಕಲಾವಿದನೂ ಊಹಿಸದ ರೀತಿಯಲ್ಲಿ ಸೃಷ್ಟಿ ಮಾಡುತ್ತಿತ್ತು. ಮನೆಯ ಅಕ್ಕ ಪಕ್ಕ ದಲ್ಲಿ ಅಡಿಕೆ ತೋಟವಿದ್ದುದರಿಂದಲೋ  ಅಥವಾ ಮನೆಯ ಹಿಂದಿನ ಗುಡ್ಡದ ಮೇಲಿನ ಬೃಹದಾಕಾರದ ಮಾವಿನ ಮರದಿಂದಲೋ ಏನೋ ಮಧ್ಯಾಹ್ನದ ಹೊತ್ತು ಮಾತ್ರ ಮನೆಯ ಮೇಲೆ ತಕ್ಕ ಮಟ್ಟಿನ ಬಿಸಿಲು ಬೀಳುತ್ತಿತ್ತು. ಹೀಗಾಗಿ ಮಳೆಗಾಲದಲ್ಲಿ ಕೆಲವೊಮ್ಮೆ ನಡುಮನೆಯ ದೇವರ ಕೋಣೆ ಕತ್ತಲ ಕೋಣೆಯಾದದ್ದೂ ಉಂಟು !

    ಮನೆಯ ಪ್ರಾಂಗಣದಲ್ಲಿ ಬೆಳಿಗ್ಗಿನ ತಿಂಡಿ ಮುಗಿಸಿ, ಎಲೆ ಅಡಿಕೆ ಜಗಿಯುತ್ತ ಆರಾಮ ಖುರ್ಚಿಯಲ್ಲಿ ಕುಳಿತ ರಾಮಭಟ್ಟರಿಗೆ ಅಡಿಕೆ ಅಟ್ಟದ ಮೇಲೆ ಹಾಕಿದ ಕೊನೆಗಳನ್ನ ಕುಳಿತಲ್ಲೇ ಮುಭಾಗದ ಹೆಂಚಿನ ಮಾಡು ಹಾಗೂ ಅಡಿಕೆ ಅಟ್ಟದ ನಡುವಿನ ಸಂದಿನಿಂದ ನೋಡುವುದೇ ಏನೋ ಒಂದು ಬಗೆಯ ಹಿಗ್ಗು. ಈ ಸಾರ್ತಿ ಮಳೆಗಾಲದಲ್ಲಿ ಮೊದಲೇ ಯೋಚನೆ ಮಾಡಿ ಎರಡೆರಡು ಸಾರ್ತಿ ಮದ್ದನ್ನು ಅಡಿಕೆ ಕೊನೆಗೆ ಹೊಡೆಸಿದ್ದು ಒಳ್ಳೆದೇ ಆಯ್ತು. ಆ ಕೆಟ್ಟ ಕೊಳೆರೋಗದಿಂದ ತಪ್ಪಿಸಿಕೊಂಡು ಬೆಳೆ ಸುಮಾರಾದ ಮಟ್ಟಿಗೆ ಬಂದಿದೆ. ನನ್ನ ಮಾತು ಕೇಳದೇ ಒಂದೇ ಸಾರ್ತಿ ಮದ್ದು ಹೊಡೆಸಿದ ಎದುರು ಮನೆಯ ಶಿವರಾಮ ಭಟ್ಟನ ಬೆಳೆ ನೋಡು ಅರ್ಧಕ್ಕರ್ಧ ಕೊಳೆ ರೋಗಕ್ಕೆ ಬಿದ್ದು ಹೋಯ್ತು. ಎನ್ನುತ್ತ ತನ್ನನ್ನು ಮೆಚ್ಚಿಕೊಳ್ಳುತ್ತಿರುವಾಗಲೇ ಅಡುಗೆ ಮನೆಯಿಂದ ಭಟ್ಟರ ಹೆಂಡತಿಯ  “ಆ ಮನೆ ಹಿಂದುಬದಿ ಮಾವಿನ ಮರದ ಹೆಣೆನ ಹೊಡೆಸುತ್ತಿರ ಇಲ್ವಾ ?” ಎಲ್ ನೋಡುದ್ರೂ ಮನೇಲಿ ಕತ್ಲೆ ಕತ್ಲೆ, ಒಳ್ಳೆ ಗುಹೇಲಿ ಹೊಕ್ಕೊಂಡ ಇದ್ದ ಹಾಗೇ ಆಗ್ತು “ ಎನ್ನುವ ಧ್ವನಿ ಪ್ರತಿದ್ವನಿಸಿದರೂ, ಅದನ್ನು ಕೇಳಿಯೂ ಕೇಳಿಸದಂತೆ ಇದ್ದರೂ, ಭಟ್ಟರ ಮನಸ್ಸು ಮಾತ್ರ ಮಾವಿನ ಮರವನ್ನೇ ಯೋಚಿಸಿತು. ಆ ಹಾಳಾದ ಬಲಿಯ ಎಲ್ಲಿ ಹೋದನೋ ಏನೋ, ಮೊನ್ನೆನೇ ಬರುತ್ತೇನೆ ಅಂತ ಹೇಳಿ ಹೋದವ ಇನ್ನೂ ಪತ್ತೇನೇ ಇಲ್ಲ. ಈಗೆಲ್ಲ ಕೆಲಸಗಾರರು ಹಾಳಾಗಿ ಹೋಗಿದ್ದಾರೆ. ಯಾರನ್ನೂ ನಂಬಲಿಕ್ಕೆ ಸಾಧ್ಯವಿಲ್ಲ ಈ ಕಾಲದಲ್ಲಿ. ನನ್ನ ಕೈಯಲ್ಲಿ ಆಗಿದ್ರೆ ಯಾವಾಗ್ಲೋ ಅದನ್ನ ಕಡಿದು ಬಿಸಾಕುತ್ತಿದ್ದೆ. ಎಂದು ಮನಸ್ಸಿನಲ್ಲಿ ಅಂದು ಕೊಳ್ಳುತ್ತಿರುವಾಗಲೇ ತನ್ನ ಪ್ರಾಯದ ದಿನಗಳಲ್ಲಿ ಮಳೆಗಾಲದ ಹಲಸಿನ ಹಣ್ಣು ಕೊಯ್ಯಲು ಮರ ಹತ್ತಿ ಜಾರಿ ಬಿದ್ದ ನೋವು ಇನ್ನೂ ಹೊಗಿಲ್ಲ ಅಂದುಕೊಳ್ಳುತ್ತ ತನ್ನ ಕಾಲನ್ನು ಒಮ್ಮೆ ಹಾಗೇ ನೀಡಿಸಿದರು. ಹಾಳಾದ ನೋವು ಸಾಯೋವರೆಗೂ ಸತಾಯಿಸುತ್ತದೆ ಎನ್ನುತ್ತ ಅದನ್ನೂ ಜೊತೆಗೂಡಿಸಿ ಶಪಿಸಿದರು. 

    ಹೀಗೇ ಭಟ್ಟರು ಯೋಚನಾ ಲಹರಿಯಲ್ಲಿದ್ದಾಗಲೇ  “ನಮಸ್ಕಾರ ಒಡೆಯ” ಎನ್ನುತ್ತ ಬಲಿಯ ಭಟ್ಟರ ಎದುರಿಗೆ ನೆಲದ ಮೇಲೆ ತನ್ನ ಕಂಬಳಿ ಹಾಸಿ ಕೂತ.  

“ಎಲ್ಲಿಂದ ಪ್ರತ್ಯಕ್ಷ ಆದೆ ಮಾರಾಯ ? ನೀನು ಹೇಳಿದ ಮೇಲೆ ಬಂದೇ ಬರ್ತೆ ಅಂತ  ಬರ ಕಾಯ್ತಾ ಇದ್ದೆ. ನೀನು ನೋಡಿದ್ರೆ ನಾಪತ್ತೆ “

“ನಾನೂ ಬರುವ ಅಂತ್ಲೇ ಇದ್ದೆ, ಏನು ಮಾಡುದು ಮನೆ ಬದಿ ತಾಪತ್ರಯ. ಗದ್ದೆ ಕೊಯ್ಲು ಅದು ಇದು ಹೇಳಿ ಬರ್ಲಿಕ್ಕೆ ಆಗ್ಲಿಲ್ಲ”
“ಗದ್ದೆ ಕೊಯ್ಲು ಆ ದಿನನೇ ಆಯ್ತು ಅಂದ್ಯಲ್ಲ ಮತ್ತೆ”

“ಆಗಿತ್ರ ಒಂದು ಸಣ್ಣ ಚೂರು ಉಳ್ಕೊಂಡಿತ್ತು. ಅದಕ್ಕೆಯ ಬರ್ಲಿಕ್ಕೆ ಆಗ್ಲಿಲ್ಲ”

“ನಿನ್ನ ಮಗನ್ದಿರೆಲ್ಲ ಇದ್ರಲ್ಲ, ಅವ್ರು ಮಾಡ್ತಿರ್ಲಿಲ್ವ ?”

“ಮಗನ್ದಿರೆಲ್ಲ ಎಲ್ರ ಮನೆ ಬದಿ ಕೆಲಸ ಮಾದುದೇ ಬಿಟ್ ಬಿಟ್ಟರೆ. ಈಗ ಏನಿದ್ರೂ ಕಲ್ ಫ್ಯಾಕ್ಟರಿ, ಪೇಟೆ ಬದಿ ಕೆಲಸ ಇಂತದೆಯ. ದುಡ್ಡು ಅಷ್ಟೇಯ, ಎರಡು ಪಟ್ಟು ಕೊಡುತ್ರು. ಈ ಗದ್ದೆ ಕೆಲಸ ಎಲ್ಲಾ ಮಾಡ್ತಿದ್ರೆ ನಮಗೇ ಲುಕ್ಸಾನ ಹೇಳಿ ಗದ್ದೆಗೆಲ್ಲ ಬರುದೇ ಇಲ್ಲ . ನಾನು ಇತ್ಲಾಗೆ ಮಾಡುಕೆ ಆಗ್ದೆ ಅತ್ತಲಾಗೆ ಬಿಡುಕು ಆಗ್ದೆ ಒದ್ದಾಡ್ತಾ ಅವ್ನೆ ನೋಡಿ”

“ಹಾನ್ ನಾನು ಕೇಳಿದ್ದೆ ಎರಡು ಮೂರು ಪಟ್ಟು ಜಾಸ್ತಿ ಸಂಬಳ ಅಂತೆ ಅದ್ಕೆ ಈಗ ಅಡಿಕೆ ತೋಟ ಬಿಡು, ಊರಲ್ಲೇ ಎಲ್ಲೂ ಕೆಲಸಕ್ಕೆ ಬರುದಿಲ್ಲ ಅಂತ್ರು. ಇಲ್ಲಿ ಆರಾಮ ಕೆಲಸ ಬಿಟ್ಟಿ ದುಡ್ಡು ಸಿಗ್ತದೆ ಹೇಳಿ ಎಲ್ಲಿಗಾದ್ರೂ ಹೋಗುದ ?”

“ಈಗೆಲ್ಲ ಕಾಲ ಬದಲಾಗದೆ ಭಟ್ರೇ ಮೊದಲು ಬೇರೆ ಗತಿ ಇರ್ಲಿಲ್ಲ ಅದ್ಕೆ  ನೀವು ಕೊಟ್ಟಷ್ಟು ತಗೊಂಡು ಕೆಲಸಕ್ಕೆ ಬತ್ತಿದ್ರು. ಈಗೆಲ್ಲ ಹಂಗಿಲ್ಲ ನೋಡಿ. ನೀವೂ ಅಷ್ಟೇಯ ರೊಕ್ಕ ಕೊಟ್ರೆ ಇಲ್ಲೇ ಊರಲ್ಲೇ ಹತ್ತಿರ ಹೇಳಿ ಬರ ಬಹುದೇನ ನೋಡಿ. ಈಗ ನಿಮ್ಮ ಹಿರಿಯ ಮಗನೂ ಬೆಂಗಳೂರು ಅಂತ ಇಷ್ಟ್ ಚಲೋ ತೋಟ ಬಿಟ್ಟಿ ಹೋಗಲಿಲ್ವಾ ಹಾಗೆಯ ಇದುವ ”

“ಊಟ, ಆಸ್ರಿ, ಚಾ ಅದರ ಮೇಲೆ ಮಧ್ಯಾಹ್ನ ಸ್ವಲ್ಪ ನಿದ್ರೆ ಅದರ ಮೇಲೆ ಸಂಬಳ ಈ ಎಲ್ಲಾ ಸವಲತ್ತು ಆ ಕೆಲ್ಸದಲ್ಲಿ ಇದ್ಯ  ಕೇಳು” ಎನ್ನುತ್ತ ಭಟ್ಟರು ಸ್ವಲ್ಪ ಉದ್ವಿಗ್ನರಾದರೂ ಬಲಿಯ ಮಾತ್ರ “ಈಗೆಲ್ಲ ಕಾಲ ಬದಲಾಗದೆರ”  ಅಂತ ಮಾತ್ರ ಉತ್ತರಿಸಿದ. 

“ನಾನೇನು ದುಡ್ಡು ಕೊಡ್ತ್ರು ಹೇಳಿ, ಅಲ್ಲಿಗೆಲ್ಲ  ಹೊಗುವವನಲ್ಲ. ನಾನೂ ನಿಮ್ ಕಾಲದವ್ನೆಯ. ಅವ್ರು ಕೆಲಸಕ್ಕೆ ಹೋದ್ರೆ, ಜಾಸ್ತಿ ಸಂಬಳ ತಂದರೆ ನಂಗೂ ಖುಶಿನೆಯ. ಆದ್ರೂ ನಮ್ಮ ಗದ್ದೆ ಎಲ್ಲಾ ಅಲಕ್ಷ ಮಾಡ್ತ್ರು ಹೇಳಿ ತಲೆಬಿಸಿ”
“ಈಗ ಮಾವಿನ ಮರ ಎಂಥದು ಮಾಡುದು ?”

“ಇವತ್ತು ಆಗುದಿಲ್ಲ. ಇನ್ನೊಂದು ದಿನ ಬರ್ತೆ. ಇಲ್ಲೇ ಅಂಗಡಿ ಬದಿಗೆ ಬಂದಿದ್ದೆ ಹಾಗೇ ಹೇಳಿ ಹೋಗ್ವ ಅಂತ ಬಂದೆ. ಈಗ ಒಂದೆರಡು ಅಡಕೆ, ಎಲೆ ಕೊಡಿ ಹೊರಡ್ತೆ” ಎನ್ನುತ್ತ ಬಲಿಯ ಅಲ್ಲಿಂದ ಹೊರಡಲು ಸಿದ್ದನಾದ.

    ಬಲಿಯ ಹೊರಟ ಮೇಲೆ ರಾಮಭಟ್ಟರು ಕತ್ತಿ  ಹಿಡಿದು ತೋಟದ ಕಡೆ ಹೊರಡ ಬೇಕೆನ್ನುವಾಗಲೇ ಅವರ ಎರಡನೆಯ ಮಗ ಶಂಕರ ಆಗ ತಾನೇ ಸ್ನಾನ ಮಾಡಿ , ಪೇಂಟು ಶರ್ಟನ್ನೇರಿಸಿ ಪೇಟೆಯ ತನ್ನ ಅಂಗಡಿಗೆ ಹೊರಡಲು ತಯಾರಾಗುತ್ತಿದ್ದ.
“ದೇವರ ಪೂಜೆನಾದ್ರೂ ಮಾಡಿದ್ಯ ಹೇಗೆ ?” ಎನ್ನುವ ಭಟ್ಟರ ಪ್ರಶ್ನೆಗೆ “ಎಲ್ಲಾ ಗೊತ್ತಿದ್ಕೊಂಡೂ ಕೆಳ್ತ್ಯಲ್ಲ. ನಿನ್ ಹೆಂಗಿದ್ರೂ ಮನೇಲೆ ಇರ್ತೆ ಹೇಳಿ ಮಾಡಿನಿಲ್ಲೆ. ಈಗ ನಂಗೆ ಹೊತ್ತಾತು. ಅರ್ಜಂಟ್  ಕೆಲಸ ಇದ್ದು ಹೊರಡ್ತೆ” ಎನುತ್ತ ಶಂಕರ ಮನೆಯ ಅಂಗಳದಲ್ಲಿದ್ದ ತನ್ನ ಮೋಟಾರು ಸೈಕಲ್ಲನ್ನು ಒಂದಿಷ್ಟು ಒದ್ದು ಶುರುಮಾಡಲು ತೊಡಗಿದ. ಮೂರ್ನಾಲ್ಕು ಒದೆತಕ್ಕೆ ಚೀರುತ್ತಾ ಅದು ಶುರುವಾಗಿದ್ದೆ ತಡ, ರುಯ್ಯನೆ ಮನೆಯ ಮುಂದಿನ ಸಪೂರ ದಾರಿಯಲ್ಲೂ ಹೆದ್ದಾರಿಯ ವೇಗದಲ್ಲಿ ಮುನ್ನುಗ್ಗಿತು. ಇತ್ತ ಭಟ್ಟರಿಗೆ ಏನೂ ಉತ್ತರಿಸಲೂ ಆಸ್ಪದ ಸಿಗದೇ ಸ್ವಲ್ಪ ಸಿಟ್ಟಿನಲ್ಲೇ ತೋಟದತ್ತ ಮುಖ ಮಾಡಿದರು. ತೋಟಕ್ಕೆ ಹೋದದ್ದೇ ತಡ, ಅಲ್ಲಿನ ತಂಪಿನ ಪ್ರಭಾವವೋ ಅಥವಾ ಪ್ರಶಾಂತತೆಯೋ ಏನೋ ರಾಮಭಟ್ಟರ ತಲೆಯ ಯಾವುದೋ ಮೂಲೆಯಲ್ಲಿ ಹುದುಗಿಕೊಂಡಿದ್ದ ಚಿಂತೆಗಳು ಒಂದೊಂದಾಗಿ ಮೆಲಕ್ಕೆಬರಲು ಆರಂಭವಾದವು.

    ಹಿರಿಯ ಮಗ ಅಂತೂ ಕೆಲ್ಸ ಅಂತ ಹೇಳಿ ಯಾವುದೋ ಕಂಪನಿಯಲ್ಲಿ ಬೆಂಗಳೂರಿನಲ್ಲೇ ಇರುವುದು. ಅವನ ಸಂಬಳ ಅವನ ಸಂಸಾರ ಸಾಗಿಸಲಿಕ್ಕಷ್ಟೆ ಸಾಕು ಅಂತ ಹೇಳಿದ್ದು ಕೇಳಿದ್ದು . ಇತ್ತೀಚಿಗಂತೂ ಅವನು ಮನೆಕಡೆಗೆ ಬರುದೇ ಕಡಿಮೆ ಆಗಿದೆ. ಯಾವಾಗ್ಲೋ ಆರು ತಿಂಗಳಿಗೋ ಹಬ್ಬಕ್ಕೊ ಹೆಂಡತಿ ಜೊತೆ ಬರುವುದು ಅಷ್ಟೆ. ಅವನು ಹೋದರೆ ಹೋಗ್ಲಿ, ಎರಡನೇ ಮಗನಾದರೂ ನೆಟ್ಟಗೆ ಜವಾಬ್ದಾರಿ ತಗೊಂಡು ತೋಟ ಮನೆ ಎಲ್ಲಾ ಸರಿಯಾಗಿ ನೋಡ್ಕೊಳ್ಳಿ ಅಂದ್ರೆ ಅವನೂ ಪೇಟೇಲಿ ಎಂಥದೋ ಅಂಗಡಿ ಹಾಕ್ಕೊಂಡು ಕೂತಿದ್ದಾನೆ. ಎಷ್ಟು ವ್ಯಾಪಾರ  ಮಾಡಿದ್ದಾನೋ ದೇವರಿಗೆ ಗೊತ್ತು. ಎಲ್ಲಾ ಮನೆಯ ದುಡ್ಡಲ್ಲೇ ಅಂಗಡಿ ನಡೆಸ್ತ ಇದ್ದಾನೆ. ಕೇಳಿದ್ರೆ ನಿನಗೆಲ್ಲ ಅದು ಅರ್ಥ ಆಗಲ್ಲ ಅಂತಾನೆ. ಅದಕ್ಕೆ ಬೇಕಾಗುವ ಅನುಭವ, ಚಾಣಕ್ಷತನ ನಿನಗೆ ಇಲ್ಲ ಅಂದ್ರೂ ಕೇಳುವದಿಲ್ಲ. ಇಲ್ಲೇ ಊರಲ್ಲೇ ಏನಾದರೂ ವ್ಯಾಪಾರ ಮಾಡಿ ತೋಟನೂ ನೋಡ್ಕ ಅಂದ್ರೆ, ಈ ಊರಲ್ಲಿ ಎಂಥ ವ್ಯಾಪಾರ ಮಾಡುದು ? ಅದಕ್ಕೆಲ್ಲ ಪೇಟೆನೇ ಆಗಬೇಕು ಅಂತ ವಾದಿಸ್ತಾನೆ. ಈ ತೋಟ ಎಲ್ಲಾ ನಿಂಗೆ ಕಡಿಮೆ ಎನಿಸಿದರೆ ಹಿಂದುಬದಿ ಖಾಲಿ ಜಾಗಕ್ಕೆ ಮತ್ತಷ್ಟು ಸಸಿ ಹಾಕಿ ತೋಟ ಬೆಳೆಸು ಅಂದ್ರೆ , ಅಲ್ಲೆಲ್ಲ ಗಿಡ ನೆಟ್ಟು ವರ್ಷಗಟ್ಟಲೆ ಕಾಯುತ್ತ  ಯಾರು ಕುಳಿತುಕೊಳ್ಳುತ್ತಾರೆ ಅನ್ನುವ ಮಾತನಾಡುತ್ತಾನೆ. ಅಲ್ಲದೇ ಡಿಗ್ರೀ ಎಲ್ಲಾ ಓದಿ ತೋಟದ ಕೆಲ್ಸ ಮಾಡುದ ಅಂತಲೂ ಕೇಳುತ್ತಾನೆ. ಎಲ್ಲರಿಗೂ ಪೇಟೆಯ ಹುಚ್ಚು. ಅಲ್ಲಿ ನೋಡಿದರೆ ಬಲಿಯನ ಮಕ್ಕಳೂ ಅಂತೆಲ್ಲ ಎಲ್ಲರೂ ಪೇಟೆಯ ಕಡೆ ಮುಖ ಹಾಕಿದ್ದಾರೆ. ಇವನು ನೋಡಿದರೆ ಅದೇ ಕಥೆ. ಇಷ್ಟು ವರ್ಷ ಎಷ್ಟೋ ತಲೆಮಾರಿನ ಜನ ಸುಖವಾಗಿಯೇ ಇಲ್ಲೇ ಬಾಳಿಲ್ಲವೇ ? ಅಲ್ಲಿ ಸಾಧಿಸಿದ್ದನ್ನು ಇಲ್ಲಿ ಸಾಧಿಸಲಿಕ್ಕೆ ಸಾಧ್ಯ ಇಲ್ಲವೇ ? ಇದೆಲ್ಲಾ ಹೇಳಿದ್ರೆ ಈಗೆಲ್ಲ ಕಾಲ ಬದಲಾಗಿದೆ ಅಂತ ಹೇಳಿ ಎಲ್ಲರೂ ಸೇರಿ ಬಾಯಿ ಮುಚ್ಚಿಸುತ್ತಾರೆ. ಈ ಪೇಟೆಯ ಹುಚ್ಚು ಇವರನ್ನ ಯಾವಾಗ ಬಿಡುತ್ತದೆಯೋ ಏನೋ. ಇವರಲ್ಲ ಹೀಗೆ ಮಾಡಿದ್ರೆ ಮುಂದೆ ನಾನು ಇಷ್ಟು ವರ್ಷ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡ ಈ ತೋಟದ ಗತಿಯೇನು? ಅತ್ತ ಕೆಲಸದವರೂ ಸಿಗದ, ಇತ್ತ ತನ್ನ ಕೈಯಲ್ಲೂ ಆಗದ ಪರಿಸ್ಥತಿ. ಮುಂದೆ ಎರಡನೇ ಮಗನೂ ಈ ರೀತಿ ಅಲಕ್ಷ್ಯ ಮಾಡಿದರೆ ತನ್ನ ನಂತರ ಈ ತೋಟ ಹಾಳು ಬಿದ್ದರೆ ಏನು ಮಾಡುವುದು. ಎಂಬೆಲ್ಲ ಚಿಂತೆಗಳು ಒಂದೊಂದಾಗಿ ಭಟ್ಟರ ತಲೆಯೊಳಗೆ ಆವರಿಸಿ ಕೊಳ್ಳುತ್ತಾ ಹೋಯಿತು.
image source: internet

    ಭಟ್ಟರು ಚಿಂತೆಯಲ್ಲಿ ಮುಳುಗಿರುವಾಗಲೇ, ಒಮ್ಮೆಲೇ ಯಾಕೋ ಸುತ್ತಲೂ ಧೃಢವಾಗಿ ನಿಂತಿದ್ದ ಅಡಿಕೆ ತೆಂಗಿನ ಮರಗಳು ಜೋರಾದ ಗಾಳಿಯಿಲ್ಲದಿದ್ದರೂ ಅವು ಅತ್ತಿತ್ತ ಭಯದಿಂದ ವಾಲತೊಡಗಿದವು. ನೋಡ ನೋಡುತ್ತಿದ್ದಂತೆಯೇ ಅವು ಕೃಷವಾಗಿ, ಬಲಹೀನವಾಗಿ ಅವುಗಳ ರೆಂಬೆಗಳೆಲ್ಲ ಬಾಡಿ ಹಳದಿ ಬಣ್ಣಕ್ಕೆ ತಿರುಗತೊಡಗಿತು. ಅವುಗಳ ಬೇರು, ನೀರು ಗೊಬ್ಬರವಿಲ್ಲದೆ ಗಟ್ಟಿಯಾದ ಬರಡು ಭೂಮಿಯಲ್ಲಿ ಒಣಗಿ ಹೋಗಿ ಸಡಿಲಾಗತೊಡಗಿತು. ಅವುಗಳೆಲ್ಲ ಅರೆಜೀವವಾಗಿ ತಮ್ಮ ದೇಹವನ್ನ ಬಾಗಿಸುತ್ತ, ಸುತ್ತಲೂ ದಯನೀಯವಾಗಿ ನಿಂತವು. ಅವೆಲ್ಲ  ಭಟ್ಟರತ್ತ ಮುಖಮಾಡಿ ಒಂದೇ ದನಿಯಲ್ಲಿ “ನಮಗ್ಯಾಕೆ ಈ ಗತಿ ತಂದೆ? ಇದೇನಾ ನಮಗೆ ಸಿಕ್ಕ ಪ್ರತಿಫಲ ?” ಎಂದು ನಿರ್ಜೀವ ದ್ವನಿಯಲ್ಲಿ ಪ್ರಶ್ನಿಸಿದವು.

 “ನಾನೇನು ಮಾಡಲಿ ಎಲ್ಲಾ ಕಾಲದ ಮಹಿಮೆ. ಕಾಲ ಬದಲಾಗಿದೆ. ನಾನು ನಿತ್ಸಹಾಯಕ” ಎಂದು ಭಟ್ಟರೂ ಕೂಗಿಕೊಂಡರು.

 “ಕಾಲವಲ್ಲ ಬದಲಾಗಿದ್ದು, ಬದಲಾಗಿದ್ದು ನೀವು ಮಾತ್ರ” ಎಂಬ ಪ್ರತ್ಯುತ್ತರ ಎಲ್ಲಿಂದಲೋ ಪ್ರತಿದ್ವನಿಸಿದಂತೆ ಆಯಿತು.

ಭಟ್ಟರು ಹುಚ್ಚನಂತಾಗಿ ಏನೂ ತೋಚದವರಂತೆ ಮನೆಯತ್ತ ಎದುರುಸಿರು ಬಿಡುತ್ತ ಓಡಿದರು.










ಭಾನುವಾರ, ನವೆಂಬರ್ 25, 2012

ಮುದುಕ ಮತ್ತು ಆಲದ ಮರ


    ಅದು ಮಳೆಗಾಲದ ಕಪ್ಪು ಬಿಳುಪಿನ ಮಬ್ಬು ಮಬ್ಬಾದ ಒಂದು ಸಂಜೆ.  ಸೂರ್ಯನು ಮೋಡಗಳ ಮಧ್ಯದಲ್ಲಿ  ಕಣ್ಣು ಮುಚ್ಚಾಲೆ ಆಟ ಆಡುತ್ತ, ಆಗೊಮ್ಮೆ ಈಗೊಮ್ಮೆ ತನ್ನ ಇರುವಿಕೆಯನ್ನ ತೋರಲೋ  ಎಂಬಂತೆ ಆ ಕಪ್ಪು ಬಿಳುಪಿನ ಸಂಜೆಯ ಮೇಲೆ ತನ್ನ ಬಣ್ಣ ಬಣ್ಣದ ಮಂದ ಪ್ರಕಾಶದಿಂದ ಚಿತ್ರಿಸುತ್ತಿದ್ದ. ಗಾಳಿಯೂ ಅಷ್ಟೆ ನಿಧಾನಕ್ಕೆ ತಂಪಾಗಿ ಬೀಸಿ ಸಂಜೆಯ ಆ ಚಿತ್ರಣಕ್ಕೆ ಆಲ್ಹಾದತೆಯನ್ನು ಜೊತೆಗೂಡಿಸಿತ್ತು. ಇಂತಹ ಅದೆಷ್ಟೋ ಸಂಜೆಯನ್ನು ಜೀವನದುದ್ದಕ್ಕೂ ನೋಡಿ ಅನುಭವಿಸಿದ್ದ ಒಬ್ಬ ಮುದುಕ ತನ್ನ ಸಂಜೆಯ ವಾಯುವಿಹಾರಕ್ಕೆಂದು  ಅಲ್ಲಿ ಬಂದವನು ದಿನನಿತ್ಯದಂತೆ  ಅಲ್ಲಿಯೇ ಇದ್ದ ಒಂದು ಹಳೆಯ ಆಲದ ಮರದ ಕೆಳಗೆ ಕುಳಿತ. ಆ ಆಲದ ಮರಕ್ಕೂ  ಅಷ್ಟೆ,  ಆ ಮುದುಕನನ್ನು ಅದೆಷ್ಟೋ ಇಂತಹ ಸಂಜೆಯಲ್ಲಿ ತನ್ನ ಬುಡದಲ್ಲಿ ಕುಳಿತಿರುವುದನ್ನು ನೋಡುವುದು ಒಂದು ರೂಡಿಯಾಗಿ ಹೋಗಿತ್ತು. ಜೊತೆಗೆ ಚಿಕ್ಕ ಸಸಿಯಿಂದ ಇಲ್ಲಿನ ವರೆಗೆ ಅದೆಷ್ಟೋ ಇಂತಹ ಸಂಜೆಯನ್ನ ಆ ಆಲದ ಮರ ಅನುಭವಿಸಿ ಅದರಲ್ಲಿ ಆಸಕ್ತಿಯನ್ನ ಕಳೆದುಕೊಂಡಿತ್ತು.  ಹೀಗೆ ಆ ಸಂಜೆಯಲ್ಲಿ ಇಬ್ಬರಲ್ಲೂ ಅಷ್ಟೇನೂ ಆಸ್ತೆ ಇಲ್ಲದಿದ್ದರೂ, ಆವತ್ತು ಮಾತ್ರ ಯಾಕೋ ಆ ಮುದುಕ ಮತ್ತು ಮರ ಒಬ್ಬರನ್ನೋಬ್ಬರನ್ನು ಕುರಿತು ಯೋಚಿಸ ತೊಡಗಿದರು.
    ಆ ಆಲದ ಮರವನ್ನ ನೋಡು, ದೇವರು ಏನೇನೆಲ್ಲ ಅದಕ್ಕೆ ಕೊಟ್ಟಿದ್ದಾನೆ ಅಂತ. ಅದರ ಆ ಬಲಿಷ್ಠ ರೆಂಬೆಯ ಮುಂದೆ ಈ ಮಳೆ, ಗಾಳಿಯೆಲ್ಲ ಯಾವ ಲೆಕ್ಕ. ಒಮ್ಮೆ ಆ ಮರದ ಕಾಂಡವನ್ನು ನೋಡು ಎಷ್ಟು ಗಟ್ಟಿಯಾಗಿದೆ. ಅದರಿಂದಲೇ ಅಲ್ಲವೇ ನೂರಾರು ವರ್ಷ ಹೀಗೆ ಈ ಮರ ಗಟ್ಟಿಯಾಗಿ ನಿಂತಿರುವುದು. ಅದರ ಬೇರುಗಳೋ ಭೂಮಿಯಲ್ಲಿ ಮೈಲುಗಟ್ಟಲೆ ದೂರ ಚಾಚಿಕೊಂಡಿರುತ್ತದೆ. ಆ ಬೇರುಗಳೇ ಅಲ್ಲವೇ ಆ ಮರಕ್ಕೆ ನಿಂತಲ್ಲೇ ಬೇಕು ಬೇಕಾದ ಆಹಾರ, ನೀರು ಎಲ್ಲಾ ತಂದು ಕೊಡುವುದು. ಅದಕ್ಕೆ ಎಂತಹ ವೈಭೋಗ ಅಲ್ಲವೇ ? ನಿಂತಲ್ಲೇ ಏನೂ ಕಷ್ಟ ಪಡದೇ ಆರಾಮಾಗಿ ಇರಬಹುದಲ್ಲವೇ ? ಆದರೆ ನನ್ನ ನೋಡು ಎಷ್ಟೆಲ್ಲಾ ವರ್ಷ ಎಲ್ಲೆಲ್ಲಿ ಓಡಾಡಿಲ್ಲ ನಾನು, ಏನೇನು ಕೆಲಸ ಮಾಡಿಲ್ಲ ನಾನು. ಯಾತಕ್ಕಾಗಿ,  ಬರಿ ಹೊಟ್ಟೆ ಬಟ್ಟೆಗಾಗಿ ಅಲ್ಲವೇ? ಜೀವನ ಪೂರ್ತಿ ಬರಿ ಹೊಟ್ಟೆ ಬಟ್ಟೆಗಾಗಿ ಹೋರಾಡಿದ್ದು ಬಿಟ್ಟರೆ ಮತ್ತೇನು ಮಾಡಿದ್ದೇನೆ ನಾನು? ಈ ಮರವಾಗಿ ಹುಟ್ಟಿದ್ದರೆ ನನ್ನ ಜೀವನ ಎಷ್ಟೊಂದು ಸುಖಮಯವಾಗಿ  ಇರುತ್ತಿತ್ತು. ಆ ಮರಕ್ಕೆ ದೇವರು ಕೊಟ್ಟ ಎಲ್ಲಾ  ಭಾಗ್ಯದ ಜೊತೆಗೆ ಬಳಲಿ ಬಂದವರಿಗೆ ನೆರಳು,ಆಶ್ರಯ ನೀಡಿದ ಪುಣ್ಯ ದೊರಕುತ್ತಿತ್ತು. ನನ್ನ ಮಕ್ಕಳೆಲ್ಲ ನನ್ನ ಸುತ್ತಮುತ್ತಲೇ ಇದ್ದು ನನ್ನನ್ನು ನೋಡಿ ಕೊಳ್ಳುತ್ತಿದ್ದರಲ್ಲವೇ ? ಈ ಮುಪ್ಪಿನಲ್ಲಿ ಒಬ್ಬಂಟಿಯಂತೆ ಬದುಕುವ ಪ್ರಸಂಗ ಬರುತ್ತಿತ್ತೆ? ಅಷ್ಟೆ ಯಾಕೆ ನಾನು ಮರವಾಗಿಯೇ ಸತ್ತಿದ್ದರೆ ಈ ಜನರು ನನ್ನನ್ನು ದೇವರ ಮೂರ್ತಿಯನ್ನಾಗಿ ಮಾಡಿ ಪೂಜಿಸುತ್ತಿರಲಿಲ್ಲವೇ? ಅಲ್ಲದೇ ಹೋದರೆ ಯಾರದೋ ಮನೆಯ ಸುಂದರ ಪೀಟೋಪಕರಣವಾಗಿ ಅದರ ವಿನ್ಯಾಸಕ್ಕೆ ಮರುಳಾಗುವವರನ್ನು ನೋಡಿ ಆನಂದಿಸುತ್ತಿದ್ದೆ. ಅದೆಂತಹ ಶ್ರೇಷ್ಠ ಜೀವನ ಅಲ್ಲವೇ !  ಆದರೆ ಈಗ ನನ್ನ ಅವಸ್ತೆ ನೋಡು , ನನ್ನನ್ನು ನೋಡಿ ಉದಾಸೀನ ಮಾಡುವವರೇ ಹೆಚ್ಚು. ಇವತ್ತು ನಾನು ಸತ್ತರೂ ಒಂದೆರಡು ದಿನ ನನ್ನ ಬಂಧುಗಳು ಶೋಕ ಆಚರಿಸಿ ನನ್ನನ್ನು ಮರೆಯುತ್ತಾರೆ ಅಷ್ಟೆ. ಎಂದು ಯೋಚಿಸುತ್ತ ಆ ಮುದುಕ ಆ ಹೇಳೆಯ ಮರವನ್ನ ನೋಡಿ ಅದನ್ನು ಮತ್ತಷ್ಟು ಅವಲೋಕಿಸ ತೊಡಗಿದ.
Image Source: Internet

     ಈ ಮುದುಕನನ್ನ ನೋಡು ಎಷ್ಟು ಪುಣ್ಯವಂತ. ದೇವರು ಅವನಿಗೆ ಏನೇನೆಲ್ಲ ಕೊಟ್ಟಿದ್ದಾನೆ ಅಂತ. ಅವನ ಆ ಕಾಲುಗಳನ್ನು ನೋಡು, ಹೇಗೆ ಅವನು ಬಯಸಿದಂತೆ ಎಲ್ಲಿ ಬೇಕಾದರಲ್ಲಿ ನಡೆಯಬಲ್ಲ. ಆ ಕೈಗಳನ್ನು ನೋಡು, ಹೇಗೆ ಬೇಕೊ ಹಾಗೆ ಅದನ್ನ ತನ್ನ ಕೆಲಸ ಮಾಡಿಕೊಳ್ಳಲು ಉಪಯೋಗಿಸಿಕೊಳ್ಳಬಲ್ಲ. ತನ್ನ ಕಣ್ಣಿನಿಂದ ಈ ಜಗತ್ತಿನ ಸೌಂದರ್ಯವನ್ನ ಸವಿಯಬಲ್ಲ. ಅದೆಲ್ಲಾ ಯಾಕೆ, ದೇವರು ಅವನಿಗೆ ಎಂತಹ ಅದ್ಭುತ ಬುದ್ದಿಶಕ್ತಿಯನ್ನ ದಯಪಾಲಿಸಿದ್ದಾನೆ ಅಲ್ಲವೇ? ಆ ಬುದ್ಧಿಶಕ್ತಿಯಿಂದ ಈ ಜಗತ್ತನ್ನೇ ತಾನು ಹೇಳಿದಂತೆ ಕೇಳುವಂತೆ ಮಾಡುತ್ತಿದ್ದಾನೆ ಅಲ್ಲವೇ? ಅವನಿಗೆ ಜೀವನದಲ್ಲಿ ಬೇಸರ ಅನ್ನುವುದೇ ಇಲ್ಲ ಅನಿಸುತ್ತದೆ. ಅವನಿಚ್ಚೆಯಂತೆ ಎಲ್ಲಿ ಬೇಕಾದರಲ್ಲಿ ಓಡಾಡಿ, ಸೃಷ್ಟಿಯ ಸೌಂದರ್ಯ ಸವಿಯುತ್ತ. ಅದ್ಬುತವಾದದ್ದನ್ನು ತನ್ನ ಬುದ್ದಿಶಕ್ತಿಯಿಂದ ಗ್ರಹಿಸುತ್ತ ಹಾಯಾಗಿ ಇರಬಹುದಲ್ಲವೇ? ನನ್ನ ಈ ಸದಾ ಬೇಜಾರಿನ ಜೀವನ ನೋಡು. ಯಾವಾಗಲೂ ನಿಂತಲ್ಲೇ ನಿಂತು ಬೇಸತ್ತು ಹೋಗಿದ್ದೇನೆ. ಆ ಮನುಷ್ಯನಂತೆ ಹುಟ್ಟಿದ್ದರೆ ಎಂತಹ ಶ್ರೇಷ್ಠ ಜೀವನವಾಗಿರುತ್ತಿತ್ತು ಅಲ್ಲವೇ? ನಾನು  ಈ ಜಗತ್ತಿನ ಅದ್ಬುತವನ್ನು ಅನುಭವಿಸಿ, ಅದ್ಬುತ ವಾದದ್ದನ್ನು ಸೃಷ್ಟಿಸಬಹುದಾಗಿತ್ತು. ಈಗ ನಾನು ಸತ್ತರೆ ಏನು ಸಾಧಿಸಿದಂತೆ ಆಗುತ್ತದೆ? ಆ ಜನರು ನನ್ನನ್ನು ಕಡಿದು ಅವರಿಷ್ಟದ ಯಾವುದೋ ಪೀಟೋಪಕರಣ ವಾಗುವುದಿಲ್ಲವೇ ನಾನು. ಅದಕ್ಕೂ ಪ್ರಯೋಜಕ್ಕೆ ಬರಲಿಲ್ಲ ಅಂತಾದರೆ  ಯಾರದೋ ಮನೆಯ ಒಲೆಯಲ್ಲಿ ಹೇಳ ಹೆಸರಿಲ್ಲದೆ ಸುಟ್ಟು ಬೂದಿಯಾಗುತ್ತೇನೆ. ಯಾರಾದರೂ ನನ್ನ ಸಾವನ್ನು ನೋಡಿ ದುಃಖಿಸುತ್ತಾರೆಯೇ? ಆ ಮುದುಕ ಸತ್ತರೆ ಬಂಧುಗಳೆಲ್ಲ ಸೇರಿ  ಅವನ ಸಾವಿಗೆ ಮರುಗುವರು. ಅವನನ್ನು ಸತ್ತನಂತರವೂ ಸ್ಮರಿಸುವರು. ಅದೆಂತಹ ಶ್ರೇಷ್ಠ ಜೀವನ ಅಲ್ಲವೇ !  ಎನ್ನುವ ಯೋಚನೆಗಳು ಆ ಹಳೆಯ ಮರವನ್ನ ಹಾದುಹೋದವು.
    ಒಮ್ಮೆಲೇ ಇದ್ದಕ್ಕಿದ್ದ ಹಾಗೇ ಮಳೆಗಾಲದ ಜೋರಾದ ಗಾಳಿ ಎಲ್ಲೆಡೆಯಿಂದ ಬೀಸ ತೊಡಗಿತು. ಇಷ್ಟು ಹೊತ್ತು ತಾಳ್ಮೆಯಿಂದ ಕಾದಿದ್ದ ಮಳೆಯೂ ಯಾಕೋ  ಒಮ್ಮೆಲೇ ಸಿಟ್ಟು ಬಂದವರಂತೆ ಆ ಗಾಳಿಯೊಡನೆ ಸೇರಿ ಕೊಂಡಿತು. ಆ ಮರದ ರೆಂಬೆಗಳೆಲ್ಲ ಗಾಳಿ ಮಳೆಯ ರಭಸಕ್ಕೆ ಹೊಯ್ದಾಡ ತೊಡಗಿದವು. ಇಂಥಹ ಅದೆಷ್ಟೋ ಗಾಳಿ ಮಳೆಗೆ ಮಯ್ಯೋಡ್ಡಿದ್ದ  ಆ ಮರವು ಮತ್ತೊಮ್ಮೆ ಅದನ್ನೆದುರಿಸಲು ಸಿದ್ದವಾಗಿ ನಿಂತಿತು. ಆ ಮುದುಕ ಬೇರೆಯೇನೂ ತೋಚದಾಗಿ ಆ ಸಿಟ್ಟಿನಿಂದ ಬೀಸುತ್ತಿದ್ದ ಗಾಳಿ ಮಳೆಯಿಂದ ತನ್ನನ್ನು ರಕ್ಷಿಸಿಕೊಳ್ಳಲು  ತನ್ನ ಮನೆಯತ್ತ ಎಷ್ಟು ಸಾಧ್ಯವೋ ಅಷ್ಟು ವೇಗವಾಗಿ ಓಡುತ್ತ ಸಾಗಿದ.  
    ಮನೆಯನ್ನ ತಲುಪುತ್ತಲೇ ಆ ಮುದುಕ ಮತ್ತೊಮ್ಮೆ ಆ ಮರದ ಬಗ್ಗೆ ಯೋಚಿಸ ತೊಡಗಿದ. ಇಂಥಹ  ಹುಚ್ಚನಂತೆ ಎರಗುವ ಈ ಗಾಳಿ ಮಳೆಯನ್ನ ಎದುರಿಸಲು ಆ ಮರ ಎಷ್ಟು ಕಷ್ಟಪಡುತ್ತಿರಬಹುದು. ನಾನಾದರೆ ಈ ಮನೆಯಲ್ಲಿ ಬೆಚ್ಚಗೆ ಚಿಂತೆಯಿಲ್ಲದೆ ಇರಬಹುದು. ಆದರೆ ಆ ಹಳೆಯ ಮರ ರಾತ್ರಿಯಿಡೀ ಆ ಗಾಳಿ ಮಳೆಗೆ ಮಯ್ಯೋಡ್ಡಿ ಚಿತ್ರಹಿಂಸೆ ಅನುಭವಿಸ ಬೇಕಲ್ಲವೇ?.  ಆ ಬಲಿಷ್ಠ ರೆಂಬೆಗಳು, ಗಟ್ಟಿಯಾದ ಕಾಂಡ, ವಿಶಾಲವಾಗಿ ಹರಡಿರುವ ಅದರ ಬೇರುಗಳಿದ್ದರೂ ಏನು ಪ್ರಯೋಜನ ಅಲ್ಲವೇ?  ಇಂಥಹ ಸಂದರ್ಭದಲ್ಲಿ ಕಷ್ಟಪಡುವುದು ಮಾತ್ರ ತಪ್ಪಲಿಲ್ಲ. ಒಂದಲ್ಲ ಒಂದು ದಿನ ಅವೂ ಪ್ರಯೋಜಕ್ಕೆ ಬಾರದಾದಾಗ ಆ ಮರದ ವ್ಯಥೆ ಊಹಿಸಲೂ ಸಾಧ್ಯವಿಲ್ಲ . ಎಂಥಹ ಹೀನಾಯ ಬದುಕು ಅದು !
    ಆ ಮರ ತನ್ನಲ್ಲೇ ಯೋಚಿಸಿತು. ನಾನು ಎಷ್ಟು ಬಲಿಷ್ಠ ಅಲ್ಲವೇ? ನಾನು ಇಂತಹ ಅದೆಷ್ಟೋ ಭಯಂಕರ ಗಾಳಿ, ಮಳೆ, ಬಿಸಿಲನ್ನ ಹೇಗೆ ತಡೆದು ನಿಂತಿದ್ದೇನೆ ಅಲ್ಲವೇ? ಪಾಪ ಆ ಮುದುಕ, ಅದೆಷ್ಟು ನಿಷ್ಯಕ್ತ ನನ್ನ ಮುಂದೆ ! ಸ್ವಲ್ಪ ಜೋರಾದ ಗಾಳಿ ಬಂದರೂ ತನ್ನ ಮನೆಯಲ್ಲಿ ಹೆದರಿ ಅವಿತಿರಬೇಕಲ್ಲವೇ ? ಆ ಕಾಲು, ಕೈ, ಅಂತಹ ಬುದ್ಧಿ ಶಕ್ತಿ ಇದ್ದರೂ ಏನು ಪ್ರಯೋಜನಕ್ಕೆ ಬಂತು ಇಂಥಹ ಸಂಧರ್ಭದಲ್ಲಿ ?  ಮಳೆ ಗಾಳಿ ನಿಲ್ಲುವುದನ್ನು ಎದುರು ನೋಡುತ್ತಾ ಹೇಡಿಯಂತೆ ಮನೆಯಲ್ಲೇ ಕುಳಿತಿರಬೇಕು. ಎಂಥಹ ಹೀನಾಯ ಬದುಕು ಅದು !